ಹಿರಿಯೂರು | ವಿವಿ ಸಾಗರ ಡ್ಯಾಂ ಕೋಡಿ ಬೀಳಲು ಎಷ್ಟು ಅಡಿ ಬಾಕಿ ಇದೆ ? ಇಲ್ಲಿದೆ ಮಾಹಿತಿ…!

1 Min Read

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 28  : ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಡ್ಯಾಂ ಕೋಡಿ ಬೀಳಲು ಕೆಲವು ಅಡಿಗಳು ಮಾತ್ರ ಬಾಕಿಯಿದೆ. 3 ಅಡಿ ನೀರು ಬಂದಲ್ಲಿ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಇಂದಿನ ವರದಿಯಲ್ಲಿ ಜಲಾಶಯಕ್ಕೆ 1386 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ 126.75 ಅಡಿ ತಲುಪಿದೆ. ಇನ್ನು ಕೇವಲ ಮೂರು ಅಡಿಯಷ್ಟು ನೀರು ಬಂದರೆ ಡ್ಯಾಂ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

1933ರಲ್ಲಿ 135.25 ಅಡಿ ತುಂಬುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ನಂತರ 89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಜಲಾಶಯ ಮೈದುಂಬಿ ಹರಿದಿತ್ತು. ಕಳೆದ ವರ್ಷ ಜಲಾಶಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಒಳಹರಿವು ನೀರು ಬಂದಿರಲಿಲ್ಲ. ಒಂದು ವೇಳೆ ಹಿಂದಿನ ವರ್ಷದಲ್ಲಿ ಒಳಹರಿವು ಬಂದಿದ್ದರೇ ಇಷ್ಟೋತ್ತಿಗೆ ಡ್ಯಾಂ ಕೋಡಿ ಬೀಳುತ್ತಿತ್ತು. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದರೇ ಮುಂದಿನ ನವೆಂಬರ್ ತಿಂಗಳಲ್ಲಿ ಡ್ಯಾಂ ಕೋಡಿ ಬೀಳಲಿದೆ. ಜಲಾಶಯ ಒಟ್ಟು 135 ಅಡಿ ಎತ್ತರದ ಹೊಂದಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ.

ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚು ಇರುವುದರಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಬೇಸಿಗೆ ಹಂಗಾಮಿನಲ್ಲಿ ಎಡನಾಲ ಮತ್ತು ಬಲನಾಲ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *