ಹಿರಿಯೂರು : ಸೂರಪ್ಪನಹಟ್ಟಿ ಗ್ರಾಮದಲ್ಲಿ ಹೊನ್ನಾರು ಪದ್ದತಿ : ರೈತರ ಸಂಭ್ರಮ

2 Min Read

ಸುದ್ದಿಒನ್, ಹಿರಿಯೂರು, ಏಪ್ರಿಲ್. 02 : ತಾಲ್ಲೂಕಿನ ಸೂರಪ್ಪನಹಟ್ಟಿ ಗ್ರಾಮದಲ್ಲಿ ಹೊನ್ನಾರು ಹೊಡೆಯುವ ಪದ್ದತಿ ನಡೆದುಕೊಂಡು ಬಂದಿದೆ.

ಹಳ್ಳಿಗಳಲ್ಲಿ ರೈತರು ತಲ ತಲಾಂತರದಿಂದಲೂ ಯುಗಾದಿ ಹಬ್ಬದ ದಿನ ಹೊನ್ನಾರು ಉಳುಮೆಯ ಜಾನಪದೀಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಈ ಗ್ರಾಮದಲ್ಲಿ ಯುಗಾದಿ ಹಬ್ಬ ಮುಗಿದ ಬಳಿಕ ಗ್ರಾಮದ ಜಮೀನುವೊಂದರಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಿ ಈ ಆಚರಣೆ ಮಾಡಲಾಯಿತು.

ಚಿನ್ನದ ಉಳುಮೆ: ರೈತರ ಜಮೀನಿನಲ್ಲಿ ಮಾಡುವ ಮೊದಲ ಉಳುಮೆಯನ್ನು ಚಿನ್ನದ ಉಳುಮೆ ಅಥವಾ ಹೊನ್ನಾರು ಎಂದು ರೈತರು ಭಾವಿಸುತ್ತಾರೆ. ಹೊಸ ಪಂಚಾಂಗದ ಪ್ರಕಾರ ಯಾರ ಹೆಸರಿನಲ್ಲಿ ಹೊನ್ನಾರು ಹೂಡಲು ಬರುತ್ತದೆಯೋ ಆ ಹೆಸರಿನ ರೈತನೇ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ವರ್ಷದ ಉಳುಮೆ ಆರಂಭಿಸುವ ಪದ್ಧತಿ ಸಾಂಪ್ರದಾಯಿಕವಾಗಿ ನಡೆದುಬಂದಿದೆ.

ಸೂರಪ್ಪನಹಟ್ಟಿ ಗ್ರಾಮಸ್ಥರು ಊರಿನ ಏಳಿಗೆಗಾಗಿ ಹೊನ್ನಾರ ಹೊಡೆಯುವ ಆಚರಣೆ ನಡೆಸಿಕೊಂಡು ಬಂದಿದ್ದಾರೆ.
ಉತ್ತಮ ಮಳೆಯಾಗಲಿ, ಫಸಲು ಬರಲಿ, ಸಮೃದ್ಧಿ ತರಲಿ ಎಂದು ಬೆಳೆ ಸಮೃದ್ಧಿ ಆಗಲಿ ಎಂದು ಗ್ರಾಮಸ್ಥರೆಲ್ಲರು, ಯಾರ ಹೆಸರಿಗೆ ರಾಶಿ, ಬಲ ಚೆನ್ನಾಗಿರುತ್ತದೋ‌ ಅಂತವರಿಂದ ಪೂಜೆ ಮಾಡಿಸಿ ನೇಗಿಲನ್ನು ಹಿಡಿಯುವ ಮೂಲಕ ಚಾಲನೆ ನೀಡಲಾಗುತ್ತದೆ. ಹೊನ್ನಾರು ಪದ್ದತಿ ಆಚರಣೆ ಮಾಡುವುದರಿಂದ ಗ್ರಾಮದಲ್ಲಿ ಪ್ರತಿ ವರ್ಷ ಒಳ್ಳೆಯ ಯೋಗ ಬರುತ್ತದೆ ಎಂಬ ಪ್ರತಿತಿಯಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ವರ್ಷ ಕಲ್ಲಪ್ಪ ಪೂಜಾರ್ ಎಂಬ ವ್ಯಕ್ತಿ ಹೊನ್ನಾರ ಹೊಡೆದಿರುವುದು ವಿಶೇಷವಾಗಿದೆ.

ಈ ದಿನ ನೇಗಿಲು, ನೊಗ, ಜಾನುವಾರುಗಳು ಹಾಗೂ ಇತರ ಸಲಕರಣೆಗಳನ್ನು ತೊಳೆದು ಅಲಂಕರಿಸುತ್ತಾರೆ. ನಂತರ ಜಾನುವಾರುಗಳು ಮತ್ತು ಕೃಷಿ ಸಲಕರಣೆಗಳಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಭೂಮಿಯಲ್ಲಿ ಮೊದಲ ಉಳುಮೆ ಮಾಡಿ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ರೈತರು ತಮ್ಮ ತಮ್ಮ ಜಮೀನಿನಲ್ಲಿ ಚಿನ್ನದ ಮೊದಲ ಉಳುಮೆ ಮಾಡುತ್ತಾರೆ. ಉತ್ತಮ ಮಳೆ – ಬೆಳೆ ಆಗಲಿ, ಎಲ್ಲರಿಗೂ ಒಳ್ಳೆಯ ಆರೋಗ್ಯ ,ಸುಖ – ಸಮೃದ್ಧಿ ಸಿಗಲಿ ಎಂದು ಭೂ ತಾಯಿ, ಪ್ರಕೃತಿಗೆ ನಮಿಸಿ ಪ್ರಾರ್ಥಿಸುತ್ತಾರೆ.

ಇಂದು ಗ್ರಾಮದಲ್ಲಿ ಮಳೆ : ಹೊನ್ನಾರು ಪದ್ದತಿ ಆಚರಣೆ ಮಾಡಿದ ದಿನದಂದೇ ಗ್ರಾಮದಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಹರ್ಷ ತುಂಬಿದೆ. ಈ ಬಾರಿ ಉತ್ತಮ ಮಳೆ ಬೆಳೆಯಾಗಿ ಗ್ರಾಮದಲ್ಲಿ ಸಮೃದ್ಧಿ ಸಿಗುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ ಕೃಷ್ಣಪ್ಪ, ಬಳ್ಳಿರಣ್ಣ, ಯಜಮಾನ ಕೆಂಚಪ್ಪ, ಬೈಲಣ್ಣ, ರಾಮಪ್ಪ, ಬಾಲಣ್ಣ, ಜಯರಾಮ್,
ಶಿವರಾಜ್, ಕೃಷ್ಣ, ಶಶಿಕುಮಾರ್, ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *