ಹಿರಿಯೂರು, (ಡಿ.13): ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಆಲೂರು ಕ್ರಾಸ್ ಬಳಿ ಇಂದು (ಸೋಮವಾರ) ಬೆಳಗಿನ ಜಾವ ಈ ದುರಂತ ಸಂಭವಿಸಿದೆ.
ಬೆಂಗಳೂರು ಕಡೆಗೆ ಈರುಳ್ಳಿ ತುಂಬಿದ್ದ ಲಾರಿ ಹೋಗುತ್ತಿರುವಾಗ ಟೈರ್ ಸ್ಪೋಟವಾಗಿ ಲಾರಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿದ್ದು, ಇನ್ನೂ ಎರಡು ಲಾರಿಗಳು ಪಲ್ಟಿಯಾಗಿವೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಮತ್ತು ಕಾರುಗಳು ಡಿಕ್ಕಿಯಾಗಿ ಸರಣಿ ಅಪಘಾತವಾಗಿದೆ.
ಮೃತರನ್ನು ಹನುಮಪ್ಪ ಕಳಕಪ್ಪ ಹುನಗುಂದಿ (30),
ಗುರಪ್ಪಾ ಹುಗರ್ (26), ರಮೇಶ್ (28), ಪ್ರಾಶಂತ್ ಹಟ್ಟಿ (36) ಗದಗ ಜಿಲ್ಲೆಯ ಹುಯಿಗೊಳ ಗ್ರಾಮದವರು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಜಿ ರಾಧಿಕಾ, ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.