ಚಿತ್ರದುರ್ಗ. ಡಿ.04: ಹಿರಿಯೂರು ನಗರದಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ ಕಾವiಗಾರಿ ಪ್ರಾರಂಭಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರ ಕೊಠಡಿಯಲ್ಲಿ ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಹಿರಿಯೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ವಿವರವಾದ ಯೋಜನಾ ಅಂದಾಜು ರೂ.206 ಕೋಟಿಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯಲ್ಲಿ ಯೋಜನಾ ವರದಿ ಮೊತ್ತ ಹೆಚ್ಚಾಗಿರುವುದರಿಂದ 02 ಹಂತಗಳಲ್ಲಿ ಕೈಗೊಳ್ಳಲು ನಿರ್ದೇಶಿಸಿದ್ದರಿಂದ ಹಿರಿಯೂರು ನಗರದ ದಕ್ಷಿಣ ಭಾಗವಾದ ವೇದಾವತಿ ನದಿಯಿಂದ ಬಲಭಾಗದ ಹಳೆಯ/ಹೃದಯ ಭಾಗದ ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರೂ.100 ಕೋಟಿಗೆ ಸೀಮಿತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಜನವರಿ 2026ರೊಳಗೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಗೊಳಿಸಲಾಗುವುದು ಎಂದರು.
ಈ ಯೋಜನೆಯಡಿ ನೀರನ್ನು ವೇದಾವತಿ ನದಿಯಲ್ಲಿ ವ್ಯರ್ಥವಾಗಿ ಬಿಡುವ ಬದಲು ಹತ್ತಿರದ ಕೈಗಾರಿಕಾ ಪ್ರದೇಶಕ್ಕೆ ಮತ್ತು ಕೆರೆಗಳಿಗೆ ತುಂಬಿಸುವ ಮೂಲಕ ಮರುಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಈ ಯೋಜನೆಯಡಿ 2ನೇ ಹಂತದ ಕಾವiಗಾರಿಗೆ ಈಗಾಗಲೇ ಅಂದಾಜು ತಯಾರಿಸಲಾಗಿದ್ದು, ಮತ್ತೊಮ್ಮೆ ಮರುಪರಿಶೀಲಿಸಿ ಯಾವುದಾದರೂ ಉಳಿತಾಯದ ಯೋಜನೆಯಡಿ ತಕ್ಷಣವೇ ಲಭ್ಯವಾಗುವ ಅನುದಾನ ಹಂಚಿಕೆ ಮಾಡಿಕೊಡಲು ಪ್ರಸ್ತಾವನೆ ನೀಡುವಂತೆ ಹಾಗೂ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಸೆಲ್ವಮಣಿ ಮಾತನಾಡಿ, ಈ ಒಳಚರಂಡಿ ಯೋಜನೆ ಕಾಮಗಾರಿಯಲ್ಲಿ ಹಿರಿಯೂರು ನಗರದ ದಕ್ಷಿಣ ಭಾಗದ 25 ವಾರ್ಡ್‍ಗಳಲ್ಲಿ ಕಾಮಗಾರಿ ನಡೆಯಲಿದ್ದು, ವಿವಿಧ ವ್ಯಾಸದ ಪೈಪ್‍ಗಳ ಮೂಲಕ ಮಲಿನ ನೀರು ಕೊಳವೆ ಮಾರ್ಗ 109. ಕಿ.ಮೀ.ಉದ್ದದಲ್ಲಿ ಹಾದುಹೋಗಲಿದ್ದು, 3691 ಯಂತ್ರಗುಂಡಿಗಳನ್ನು ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ-4 ರ ಬೈಪಾಸ್ ವೇದಾವತಿ ನದಿಯ ದಕ್ಷಿಣ ದಂಡೆಯಲ್ಲಿ ವೆಟ್‍ವೆಲ್ ಹಾಗೂ ಸಂಬಂಧಿಸಿದ ಘಟಕಗಳನ್ನು ನಿರ್ಮಿಸಲಾಗುವುದು. ಇದಲ್ಲದೇ ಹಳೆಯ ರಾಷ್ಟ್ರೀಯ ಹೆದ್ದಾರಿ-4 ರ ವೇದಾವತಿ ನದಿಯ ಸೇತುವೆ ಬಳಿ ವೆಟ್‍ವೆಲ್ ಹಾಗೂ ಸಂಬಂಧಿಸಿದ ಘಟಕಗಳನ್ನು (ಸಾಗರ್ ರೆಡ್ಡಿ ಹೋಟೆಲ್ ಎದುರು) ನಿರ್ಮಿಸಲಾಗುವುದು. 02 ಸಂಖ್ಯೆ ವೆಟ್‍ವೆಲ್‍ಗಳಿಮದ ಮಲಿನ ನೀರು ಶುದ್ಧೀಕರಣ ಘಟಕದವರೆಗೂ ಡಿ.ಐ. ಏರು ಕೊಳವೆ ಮಾರ್ಗವನ್ನು 2.40 ಕಿ.ಮಿ. ಅಳವಡಿಸುವುದು, ಹೊಸ ಬೈಪಾಸ್ ರಸ್ತೆಯ ಸಮೀಪ 5.00 ಎಂ.ಎಲ್.ಡಿ. ಸಾಮಥ್ರ್ಯದ ಎಸ್.ಬಿ.ಆರ್. ತಂತ್ರಜ್ಞಾನದ ಮಲಿನ ನೀರು ಶುದ್ಧಿಕರಣ ಘಟಕ ನಿರ್ಮಿಸುವುದು, 02 ಸಂಖ್ಯೆಯ ವೆಟ್‍ವೆಲ್‍ಗಳಲ್ಲಿ ಮಲಿನ ನೀರುವ ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲು ಯಂತ್ರೋಪಕರಣಗಳ ಅಳವಡಿಕೆ, ಮಲಿನ ನೀರು ಶುದ್ಧೀಕರಣ ಘಟಕ ಹಾಗೂ 02 ಸಂಖ್ಯೆಯ ವೆಟ್‍ವೆಲ್‍ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ 11 ಕೆ.ವಿ. ವಿದ್ಯುತ್ ಮಾರ್ಗ ಅಳವಡಿಕೆ ಹಾಗೂ ಈ ಮಲಿನ ನೀರುವ ಶುದ್ಧೀಕರಣ ಘಟಕವನ್ನು ನಿರಂತರವಾಗಿ ನಿಗಾವಹಿಸಲು ವಿನೂತನ ತಂತ್ರಜ್ಞಾನ ಬಳಕೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ 8.61 ಎಂ.ಎಲ್.ಡಿ. ಮಲಿನ ನೀರನ್ನು ವಿನೂತನ ತಂತ್ರಜ್ಞಾನದಡಿಯಲ್ಲಿ ಶುದ್ಧೀಕರಿಸಿ ವೇದಾವತಿ ನದಿಗೆ ಬಿಡಲಾಗುತ್ತಿದ್ದು, ಈ ಸಾಮಥ್ರ್ಯದ ಬಳಸಿದ ನೀರು ನಿರ್ವಹಣಾ ಘಟಕ ನಿರ್ಮಿಸಲು ರೂ. 15.50 ಕೋಟಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ನೀಡಲಾಗಿರುತ್ತದೆ. ಸದರಿ ನೀರು ಮರುಬಳಕೆಗೆ ಯೋಗ್ಯವಾಗಿರುವುದರಿಂದ ಹತ್ತಿರದ ಕೈಗಾರಿಕಾ ಕಾರ್ಖಾನೆಗಳಿಗೆ ಮತ್ತು ಕೆರೆಗಳಿಗೆ ಮರು ಬಳಕೆಗೆ ಉಪಯೋಗಿಸಬಹುದಾಗಿರುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಸೆಲ್ವಮಣಿ, ಮುಖ್ಯ ಇಂಜಿನಿಯರ್ ಪ್ರವೀಣ್‍ಲಿಂಗಯ್ಯ, ಕಾರ್ಯಪಾಲಕ ಇಂಜಿನಿಯರ್ ಮಲ್ಲೇಶ್‍ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಓಬಾನಾಯ್ಕ್, ಹಿರಿಯೂರು ನಗರಸಭೆ ಆಯುಕ್ತ ವಾಸೀಂ ಇದ್ದರು.
