ಸುದ್ದಿಒನ್, ಹಿರಿಯೂರು, ಡಿಸೆಂಬರ್. 25 : ಊಟ ತರಲು ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಮೂರು ನಾಯಿಗಳು ದಾಳಿ ನಡೆಸಿ, ಕಾರ್ಮಿಕನನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಂದಿಹಳ್ಳಿ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಶಿರಾ ತಾಲೂಕಿನ ಯರದಕಟ್ಟೆ ಗ್ರಾಮ ಮಧು (23 ವರ್ಷ) ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಾಲೂಕಿನ ನಂದಿಹಳ್ಳಿ ಬಳಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಯಿಗಳು ವ್ಯಕ್ತಿ ಮೇಲೆ ದಾಳಿ ಮಾಡಿ ಬಲಗೈಯನ್ನು ರಕ್ತ ಸುರಿಯುವಂತೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದು, ನಾಯಿಯ ದಾಳಿಗೆ ಒಳಗಾಗಿರುವ ವ್ಯಕ್ತಿ ಘಡ ಘಡ ನಡುಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಂದಿಹಳ್ಳಿ ಬಳಿ ಕೆಲಸಕ್ಕೆ ಬಂದಿದ್ದ ಬಡ ಕಾರ್ಮಿಕ ಮಧು ಊಟ ತರಲು ನಂದಿಹಳ್ಳಿ ಕಡೆಯಿಂದ ಆದಿವಾಲ ಕಡೆಗೆ ನಡೆದು ಕೊಂಡು ಬರುವಾಗ ಶಿಕ್ಷಣ ಸಂಸ್ಥೆಯ ನಾಯಿಗಳು ದಾಳಿ ನಡೆಸಿವೆ. ಕಾರ್ಮಿಕನ ಕಿರುಚಾಟ ಕೇಳಿ ವಾಹನ ಸವಾರರು ರಕ್ಷಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇರಬೇಕಿದ್ದ ನಾಯಿಗಳು ರಸ್ತೆಗೆ ಬಂದು ಅಮಾಯಕನ ಮೇಲೆ ದಾಳಿಯನ್ನು ಖಂಡಿಸಿ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಬಳಿ ಬಂದು ಗಾಯಳನ್ನು ನೋಡುತ್ತಾ ನಿಂತಿದ್ದ
ಸಂಸ್ಥೆಯವರನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮಾಯಕನ ಜೀವಕೆ ಹೆಚ್ಚು ಕಡಿಮೆ ಆದರೆ ನೀವೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದಾರೆ.