ಹಿರಿಯೂರು | ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ…!

2 Min Read

 

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 12 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಬಹುತೇಕ ಭರ್ತಿಯಾಗಿದ್ದು, 4ನೇ ಬಾರಿಗೆ ಕೋಡಿ ಬೀಳಲಿದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಿವಿ ಸಾಗರ ಡ್ಯಾಂ ಒಂದೆರಡು ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆ ಇದೆ. ಇಂದು ಸಹ ಜಲಾಶಯಕ್ಕೆ 1455 ಕ್ಯೂಸೆಕ್ ಒಳಹರಿವು ನೀರು ಮುಂದುವರಿದಿದ್ದು, ಇದರಿಂದ ಪ್ರಸ್ತುತ ಜಲಾಶಯ ನೀರಿನ ಮಟ್ಟ 129.55 ಅಡಿ ತಲುಪಿದೆ.

ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಜಲಾಶಯವೂ ಒಂದಾಗಿದ್ದು, ಹಿರಿಯೂರಿಂದ ಹೊಸದುರ್ಗ ಮಾರ್ಗವಾಗಿ 18 ಕಿ.ಮೀ ಎಡಭಾಗಕ್ಕೆ ಚಲಿಸಿದರೆ ಡ್ಯಾಂ ಕಾಣಬಹುದಾಗಿದೆ. ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದೆ. ಇದಕ್ಕೆ ಕ್ರಸ್ಟ್‌ ಗೇಟ್‌ಗಳನ್ನು ಅಳವಡಿಸಿಲ್ಲ. ಇದೀಗ ಕ್ರಸ್ಟ್ ಗೇಟ್ ಅಳವಡಿಸಬೇಕು ಅಥವಾ ಕೋಡಿ ತಗ್ಗಿಸಬೇಕು ಎಂದು ಪರ ವಿರೋಧ ಹಿರಿಯೂರು ಮತ್ತು ಹೊಸದುರ್ಗ ಮಧ್ಯೆ ಜಟಾಪಟಿ ನಡೆಯುತ್ತಿದೆ. ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ಈ ನೀರು ಹಿರಿಯೂರಿನ ವೇದಾವತಿ ನದಿ ಮೂಲಕ ಚಳ್ಳಕೆರೆ, ಮೊಳಕಾಲ್ಮೂರು ಪ್ರವೇಶಿಸಿ ಮುಂದೆ ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯ ಸೇರುತ್ತದೆ.

1935 ರಲ್ಲಿ ಮೊದಲ ಬಾರಿಗೆ 135 ಅಡಿ ನೀರು ತುಂಬಿ ಡ್ಯಾಂ ಮೈದುಂಬಿ ಹರಿದಿತ್ತು. ಅದಾದ ನಂತರ 2022ರಲ್ಲಿ, 2025 ರ ಜನವರಿಯಲ್ಲಿಯೂ ಸಹಾ ಕೋಡಿ ಬಿದ್ದಿತ್ತು. ಇದೀಗ ಮತ್ತೊಮ್ಮೆ ಭರ್ತಿಯಾಗಿ ಕೋಡಿ ಬೀಳುವ ಹಂತದಲ್ಲಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬೀಳುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು, ಕೋಡಿ ಬೀಳಲು ಕ್ಷಣ ಗಣನೆ ಆರಂಭವಾಗಿದೆ. ಜಲಾಶಯದಲ್ಲಿ ಹೆಚ್ಚು ನೀರು ಇರುವುದರಿಂದ ಸುತ್ತ ಮುತ್ತಲಿನ ಪರಿಸರ ನೋಡುಗರನ್ನು ಕೈ ಬಿಸಿ ಕರೆಯುತ್ತಿದೆ. ಜಲಾಶಯ ಬಹುತೇಕ ಭರ್ತಿಯಾಗಿದ್ದು ದಿನನಿತ್ಯ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಾಶಯ ನೋಡಲು ಬಂದಿರುವ ಪ್ರವಾಸಿಗರು ಕೋಡಿ ಜಾಗದಲ್ಲಿ ಹಾಗೂ ಹಿನ್ನೀರಿಗೆ ಧುಮುಕಿ ಅಥವಾ ಇಳಿಯುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ.

ಜಲಾಶಯದ ಹಿನ್ನೀರು ಪ್ರದೇಶ ಬಹುತೇಕ ಹೊಸದುರ್ಗ ಭಾಗದಲ್ಲಿದೆ. ಡ್ಯಾಂ ಬಳಿ ನಿಂತು ನೋಡಿದರೆ ಎತ್ತ ಕಣ್ಣು ಹಾಯಿಸಿದರೂ ನೀರು ಆವರಿಸಿದ್ದು, ವಿಶಾಲವಾದ ಪ್ರದೇಶದವರೆಗೂ ಜಲರಾಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ನೀರಿನ ಮೂಲ ಇಲ್ಲದನ್ನು ಕಂಡು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ಭಾಗದ ರೈತರಿಗೆ ನೀರಿನ ಅನುಕೂಲವಾಗುವ ನಿಟ್ಟಿನಲ್ಲಿ 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ಕಟ್ಟಿಸಿದರು. 1897ರಲ್ಲಿ ಕಾಮಗಾರಿ ಪ್ರಾರಂಭಿಸಿ 1907ರಲ್ಲಿ ಪೂರ್ಣಗೊಳಿಸಿದರು. ಇದೀಗ ಜಲಾಶಯಕ್ಕೆ 118 ವರ್ಷಗಳ ಸುದೀರ್ಘ ಕಾಲದ ಇತಿಹಾಸವಿದೆ. ಜಲಾಶಯ ಒಟ್ಟು 135 ಅಡಿ ಎತ್ತರದ ಹೊಂದಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.

ಒಟ್ಟಾರೆಯಾಗಿ ಮಾರಿಕಣಿವೆ ಡ್ಯಾಂ ಎರಡು ಗುಡ್ಡಗಳ ನಡುವೆ ನಿರ್ಮಾಣವಾಗಿದ್ದು ನೋಡುಗರನ್ನು ಮನಸೂರೆಗೊಳ್ಳುತ್ತದೆ. ಒಮ್ಮೆ ಜಲಾಶಯ ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಿಸಬಹುದಾಗಿದೆ.

Share This Article
Enable Notifications OK No thanks