ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್ ವಿಷಯಕ್ಕೆ ಬಡಿದಾಡಿಕೊಂಡ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆರ್ ಟಿ ಐ ಕಾರ್ಯಕರ್ತ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಹಕಾರ ಸಂಘಗಳ ಮಹಾ ಮಂಡಲದ ರಾಜ್ಯ ನಿರ್ದೇಶಕ ಕಂದಿಕೆರೆ ಜಗದೀಶ್ ಮತ್ತು ಯೂತ್ ಕಾಂಗ್ರೆಸ್ ನ ತಾಲ್ಲೂಕು ಉಪಾಧ್ಯಕ್ಷ ಜೆಜಿ ಹಳ್ಳಿ ಕೇಶವ ಅಂಡ್ ಟೀಂ ನಡುವೆ ನಡೆದ ಕದನವಿದು. ಗ್ರಾಮ ಪಂಚಾಯ್ತಿಯ ಕಾಮಗಾರಿಗಳ ಟೆಂಡರ್ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದ್ದು ಜೆಜಿ ಹಳ್ಳಿ ಕೇಶವ ಎಂಬುವರು ಎಲ್ಲಿದ್ದೀಯೋ ಮನೆಗೆ ಬರುತ್ತೇನೆ, ಇವತ್ತು ಇದೆ ನಿನಗೆ, ಮನೆಗೆ ಬಂದು ಹೊಡೆಯುತ್ತೇನೆ. ಪೂರ್ಣಿಮಕ್ಕನ ಎದಿರು ಹಾಕಿಕೊಂಡು ಸಾಹೇಬನಿಗೆ ವೋಟ್ ಹಾಕಿಸಿರೋದು ನಾವು, ಇರೋ ಬರೋ ಪಂಚಾಯ್ತಿಗಳಲೆಲ್ಲಾ ಕೈಯಾಡಿಸ್ತೀಯ ಎಂದು ಮಾತಾಡಿರುವ ಆಡಿಯೋ ಸಹ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಎರಡು ಕಡೆಯವರು ಜಗಳದಲ್ಲಿ ನೂಕಾಟ, ತಳ್ಳಾಟವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೇಶವ್, ಮಾರುತಿ ಮತ್ತು ಇತರೇ ಏಳೆಂಟು ಜನರ ವಿರುದ್ಧ ನಗರ ಠಾಣೆಯಲ್ಲಿ ಜಗದೀಶ್ ಕಂದೀಕೆರೆ ಪತ್ನಿ ಪ್ರಕರಣ ದಾಖಲಿಸಿದ್ದಾರೆ.

