ಬೆಂಗಳೂರು: ಚಿತ್ರದುರ್ಗದ ಹಿರಿಯೂರು ಬಳಿ ಭೀಕರ ರಸ್ತೆ ಅಪಘಾತ ನಡೆದಿತ್ತು. ಬಸ್ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದಾರೆ. ಸಾಕಷ್ಟು ಮಂದಿಗೆ ಗಾಯಗಳು ಕೂಡ ಆಗಿದೆ. ಗಾಯಾಳುಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಸಂಬಂಧ ಇದೀಗ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ ಚಾಲನೆ ಮಾಡುತ್ತಿರುವುದು. ಹೀಗಾಗಿ ರಾತ್ರಿ ಸಮಯದಲ್ಲಿ ಸಂಚಾರ ಮಾಡುವವರು ಸಂಜೆಯೇ ನಿದ್ದೆ ಮಾಡಿ ಎದ್ದರೆ ಒಳ್ಳೆಯದು. ಈ ನಿದ್ದೆ ಮಂಪರಿನಿಂದ ಆಗುವ ಅನಾಹುತ ತಪ್ಪಿಸಲು ಚಾಲಕರು ಕೆಲ ಸಮಯ ವಾಹನಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು. ಅದರಲ್ಲೂ ಮಧ್ಯರಾತ್ರಿ 12 ರಿಂದ 4 ಗಂಟೆಗಳವರೆಗೆ ನ್ಯಾಷನಲ್ ಹೈವೇಗಳ ಬೇಸ್ ಗಳಲ್ಲಿ ವಿಶ್ರಾಂತಿ ಪಡೆಯುವಂತೆ ಹೊಸ ಗೈಡ್ ಲೈನ್ಸ್ ಅನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.
ಹಿರಿಯೂರಿನ ಬಳಿ ಅಪಘಾತಕ್ಕೀಡಾದ ಬಸ್ ನಲ್ಲಿ ಸುಟ್ಟು ಕರಕಲಾದವರು ಇನ್ನು ಬಾಳಿ ಬದುಕಬೇಕಾದವರೇ. ಮದುವೆಗೆ ದಿನಾಂಕ ನಿಗದಿಯಾಗಿದ್ದ ಯುವತಿ ಇಲ್ಲ, ಕೆಲಸಕ್ಕೆ ಸೇರಿ ಜೀವನ ಕಟ್ಟಿಕೊಳ್ಳುವ ಆಸೆಯಲ್ಲಿದ್ದ ಯುವತಿಯರು ಇಲ್ಲ. ಬಸ್ ಬೆಂಕಿಗೆ ಸುಟ್ಟು ಭಸ್ಮವಾಗಿ ಬಿಟ್ಟರು. ಮೃತರ ದೇಹವನ್ನು ಗುರುತಿಸಲಾಗದ ಸ್ಥಿತಿ ಪೋಷಕರದ್ದಾಗಿತ್ತು. ಈ ರೀತಿಯ ಘಟನೆಗಳು ಮತ್ತೆ ಸಂಭವಿಸದೇ ಇರಲೆಂದು ಕೇಂದ್ರಕ್ಕೆ ರಾಮಲಿಂಗಾ ರೆಡ್ಡಿ ಅವರು ಪತ್ರ ಬರೆಯಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

