ಸುದ್ದಿಒನ್, ಹಿರಿಯೂರು, ಡಿಸೆಂಬರ್. 25 : ತಾಲ್ಲೂಕಿನ ಜವಗೊಂಡನಹಳ್ಳಿ ಸಮೀಪದ ಗೊರ್ಲತ್ತು ಕ್ರಾಸ್‌ನಲ್ಲಿ (ರಾಷ್ಟ್ರೀಯ ಹೆದ್ದಾರಿ 48 ರಲ್ಲಿ) ಗುರುವಾರ ಮುಂಜಾನೆ ಖಾಸಗಿ ಸ್ಲೀಪರ್ ಬಸ್ ಟ್ರಕ್‌ಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ಈವರೆಗೂ ಐವರು ಸಾವನ್ನಪ್ಪಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಡೆದ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಗೊಂದಲ ಉಂಟಾಗಿತ್ತು. ಸ್ಲೀಪರ್ ಬಸ್ ಗೆ ಬೆಂಕಿ ಹೊತ್ತಿಕೊಂಡಾಗ ಮುಂಜಾನೆಯ ಸಮಯವಾಗಿದ್ದರಿಂದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 20 ಮಂದಿ ಮೃತಪಟ್ಟಿದ್ದಾರೆಂದು ನಂತರ 17 ಮಂದಿ, 11 ಮಂದಿ, 9 ಮಂದಿ ಎಂದು ಹೇಳಲಾಗುತ್ತಿತ್ತು. ಘಟನೆ ನಡೆದ ಸ್ಥಳಕ್ಕೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ರವಿಕಾಂತೇ ಗೌಡ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂತಿಮವಾಗಿ ಈ ಘಟನೆಯಲ್ಲಿ ಈವರೆಗೂ ಐವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಾಯಾಳುಗಳನ್ನು ಸಿರಾ ಮತ್ತು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದ್ದಾರೆ.
ಮಾಹಿತಿ ಬೇಕಾದವರು : 9480803100 / 9480803170 / 8194222782 ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

