ಹಿರಿಯೂರು, ನವೆಂಬರ್. 25 : ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಡ್ಯಾಂ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ 160ನೇ ದಿನಕ್ಕೆ ಕಾಲಿಟ್ಟಿತು.
ಧರಣಿ ಕುರಿತು ರೈತ ಸಂಘ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಆರೇಳು ತಿಂಗಳಿಂದ ವಿವಿಧ ರೀತಿಯ ಚಳುವಳಿ ನಡೆಸಿ, ಸರ್ಕಾರದ ಗಮನ ಸೆಳೆದರು ಇದುವರೆಗೂ ಸರ್ಕಾರ ಸ್ಪಂದಿಸದೆ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸೆಂಬರ್ 9 ಚಳಿಗಾಲದ ಅಧಿವೇಶನ ಪ್ರಾರಂಭವಾಗುವುದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಉದ್ದೇಶದಿಂದ ಡಿಸೆಂಬರ್ 9ರಂದು ಹಿರಿಯೂರು ಬಂದ್ ಮಾಡುವ, ಮೂಲಕ ಸರ್ಕಾರವನ್ನು ಮತ್ತೊಮ್ಮೆ ಗಮನ ಸೆಳೆಯಲಾಗುವುದು ಎಂದರು.
ಕಳೆದ 100 ವರ್ಷಗಳಲ್ಲಿ ತಾಲೂಕಿನಲ್ಲಿ ಸರಾಸರಿ ಮಳೆ ವರದಿ ಇತಿಹಾಸ ಗಮನಿಸಿದರೆ 10 ವರ್ಷಕ್ಕೊಮ್ಮೆ ಮೂರು ವರ್ಷ ಮಾತ್ರ ಮಳೆ ಬಂದಿರುತ್ತದೆ. ಉಳಿದ ಏಳು ವರ್ಷ ಬರಗಾಲಕ್ಕೆ ತುತ್ತಾಗಿದೆ. ಆದ್ದರಿಂದ ಈ ಭಾಗದ ಕೆರೆಗಳಿಗೆ ತುರ್ತಾಗಿ ನೀರು ತುಂಬಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿ ಕಾಮಗಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದನ್ನ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಆಲೂರು ಸಿದ್ದರಾಮಣ್ಣ ಮಾತನಾಡಿ ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡರೆ ಸರ್ಕಾರ ಖಂಡಿತವಾಗಿಯೂ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತದೆ. ನಮ್ಮಲ್ಲಿರುವ ವಾಣಿವಿಲಾಸ ಜಲಾಶಯ ಕೋಡಿ ಬೀಳುವ ಹಂತದಲ್ಲಿದೆ.
ಆದರೆ ಜೆಜಿ ಹಳ್ಳಿ ಭಾಗದ ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಜೆಜೆ ಹಳ್ಳಿ, ಕಸಬಾ ಹಾಗೂ ಐಮಂಗಳ ಭಾಗದ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತೀವ್ರತರದ ಚಳುವಳಿ ಮಾಡಲು ರೈತ ಸಂಘ ಸಿದ್ಧವಾಗಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಂಆರ್ ಈರಣ್ಣ, ಅಶ್ವತಪ್ಪ, ಈರಣ್ಣ, ಕನ್ಯಪ್ಪ, ಜಯರಾಮಪ್ಪ, ಮಹೇಶ್, ಮಂಜುನಾಥ್, ರಾಜಪ್ಪ ಕೆಆರ್ ಹಳ್ಳಿ, ರಾಜಕುಮಾರ್, ರಾಮಯ್ಯ, ಸಣ್ಣತಿಮ್ಮಣ್ಣ, ವಿರೂಪಾಕ್ಷಪ್ಪ, ರಾಜಣ್ಣ, ಸಿದ್ದಪ್ಪ, ರಮೇಶ್, ದೇವೇಗೌಡ, ಚಂದ್ರಣ್ಣ, ವಜೀರ್ ಸಾಬ್, ಮಹೇಶ್, ಖಲೀಲ್ ಸಾಬ್, ಕಾಂತಣ್ಣ ಅನಂತಪ್ಪ, ಚಿತ್ರಲಿಂಗಪ್ಪ, ಕರಿಯಪ್ಪ, ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.