ಹಿರಿಯೂರು : ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಹಾಗೂ ಗಾಯಿತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಹಾಗೂ ಐಮಂಗಲ ಹೋಬಳಿಯ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಿರಿಯೂರು ಬಂದ್ ಗೆ ಕರೆ ನೀಡಲಾಗಿದೆ.
![](https://suddione.com/content/uploads/2024/10/gifmaker_me-5-1.gif)
ತಾಲೂಕಿನ ಜವನಗೊಂಡನಹಳ್ಳಿಯ ಗಾಯಿತ್ರಿ ಡ್ಯಾಂ ಸೇರಿದಂತೆ ಹೋಬಳಿಮ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕಳೆದ 215 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಹಿರಿಯೂರು ಬಂದ್ ಗೆ ಕರೆ ನೀಡಿದ್ದಾರೆ.
ಬಂದ್ ಕುರಿತು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ ಟಿ. ತಿಪ್ಪೇಸ್ವಾಮಿ ಮಾತನಾಡಿ ಜವನಗೊಂಡನಹಳ್ಳಿಯ ಗಾಯಿತ್ರಿ ಜಲಾಶಯ ಮತ್ತು ಹೋಬಳಿಯ 6 ಕೆರೆಗಳು, ಐಮಂಗಲ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅನೇಕ ಚಳುವಳಿ ಹೋರಾಟ ಮಾಡಿಕೊಂಡು ಬಂದರೂ ಸಹ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗಮನ ಹರಿಸದೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ರೈತರನ್ನು ನಿರ್ಲಕ್ಷ್ಯ ಮಾಡಿಕೊಂಡು ಬಂದಿದೆ. ರೈತರನ್ನು ಕಡೆಗಣಿಸಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೋಮವಾರ ಬೆಳಗ್ಗೆ ನಗರದ ಗಾಂಧಿ ವೃತ್ತದಲ್ಲಿರುವ ಶ್ರೀ ಕಣಿವೆ ಮಾರಮ್ಮ ದೇವಸ್ಥಾನ ಬಳಿ ಎಲ್ಲಾರು ಸೇರಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುತ್ತದೆ. ನಂತರ ಕಣಿವೆ ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿ ಸಮಾವೇಶ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಬಂದ್ ಹಿನ್ನೆಲೆಯಲ್ಲಿ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಶಾಂತ ರೀತಿಯಿಂದ ಬಂದ್ ಆಚರಿಸಬೇಕು. ಹಿರಿಯೂರು ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವದ ಹೆಚ್ಚು ಇರುವುದರಿಂದ ಈ ಬಂದ್ ಗೆ ಕರೆ ನೀಡಲಾಗಿದ್ದು,
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
![](https://suddione.com/content/uploads/2025/01/studio-11.webp)