ಚಿತ್ರದುರ್ಗ ಅ. 04 : ಹಿರಿಯೂರು ತಾಲ್ಲೂಕು ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಧ್ಯ ಕರ್ನಾಟಕ ಭಾಗದ ರೈತರ ಆಶಾಕಿರಣವಾಗಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ತಳಿ ಸಂವರ್ಧನೆ, ಬೇಸಾಯ ಕ್ರಮ ಹಾಗೂ ಕೃಷಿ ತಾಂತ್ರಿಕತೆ ಅಭಿವೃದ್ಧಿಯಲ್ಲಿ ಸಂಶೋಧನೆ ಕೈಗೊಂಡು ನಾಡಿಗೆ ಕೊಡುಗೆ ನೀಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 06 ರಂದು ಬಬ್ಬೂರು ಫಾರಂ ಗೆ ಆಗಮಿಸಿ, ಶತಮಾನೋತ್ಸವ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
1916ರಲ್ಲಿ ಸ್ಥಾಪನೆಯಾದ ಈ ಸಂಶೋಧನಾ ಕೇಂದ್ರವು 2016 ರಲ್ಲಿ ಶತಮಾನೋತ್ಸವ ಪೂರೈಸಿದೆ. ಬಬ್ಬೂರು ಫಾರಂನಲ್ಲಿ ಶತಮಾನೋತ್ಸವ ನೆನಪಿಗಾಗಿ ನಿರ್ಮಿಸಲಾಗಿರುವ ಶತಮಾನ ಭವನ ಲೋಕಾರ್ಪಣೆ ಮಾಡಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣಕ್ಕೂ ಚಾಲನೆ ನೀಡುವರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕೃಷಿ ಸಂಶೋಧನಾ ಕೇಂದ್ರದಿಂದ ಹೊರತರಲಾಗಿರುವ ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡುವರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಸ್ಮರಣ ಸಂಚಿಕೆ ಹಾಗೂ ಭೂ ವಿಜ್ಞಾನ, ಗಣಿಗಾರಿಕೆ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ರಾಜ್ಯದ ವಿವಿಧ ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯಗಳ ಕುಲಪತಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು, ಸಂಶೋಧನಾ ಕೇಂದ್ರದ ವ್ಯವಸ್ಥಾಪನ ಮಂಡಳಿ ಸದಸ್ಯರು, ಸಂಶೋಧನಾ ಕೇಂದ್ರ ಅಧಿಕಾಗಳು ಹಾಗೂ ಕೃಷಿಕ ಸಮಾಜ ಅಧ್ಯಕ್ಷರು, ಸದಸ್ಯರು ಹಾಗೂ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಬಬ್ಬರೂ ಕೃಷಿ ಪಾರಂ ಸ್ಥಾಪನೆ ಇತಿಹಾಸ: 1899 ರಲ್ಲಿ ಬೆಂಗಳೂರಿನಲ್ಲಿ ಮೈಸೂರು ರಾಜ್ಯದ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಅವರು ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಾರಣಿಕರ್ತರಾದರು. ನಂತರ 1906 ರಲ್ಲಿ ಹೆಬ್ಬಾಳ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಡಾ.ಲೆಸ್ಲಿ ಕೋಲ್ಮನ್ ಚಿತ್ರದುರ್ಗ ಜಿಲ್ಲೆಯಲ್ಲಿ ಹತ್ತಿ ಹಾಗೂ ಕಬ್ಬು ಸಂಶೋಧನೆಗಾಗಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಡಾ.ಲೆಸ್ಲಿ ಕೋಲ್ಮನ್ ಅವರ ಸತತ ಪ್ರಯತ್ನದ ಫಲವಾಗಿ ಜುಲೈ, 1916ರಲ್ಲಿ ಚಿತ್ರದುರ್ಗ ಹಿರಿಯೂರಿನ ಬಬ್ಬೂರಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯಾಯಿತು.
ತಳಿಗಳ ಅಭಿವೃದ್ಧಿ : ಆರಂಭದಲ್ಲಿ ಬಬ್ಬೂರಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಎಸ್-69 ಎನ್ನುವ ಹೊಸ ಹತ್ತಿ ತಳಿಯನ್ನು ಹೊರಂತಂದು ಸುಮಾರು 6000 ಎಕರೆ ಜಮೀನಿಗೆ ಬಿತ್ತನೆ ಬೀಜ ಉತ್ಪಾದಿಸಿ ವಿತರಿಸಲಾಯಿತು.
ನಂತರ ಹೆಚ್.ಎಂ.-544 ಹಾಗೂ ಹೆಚ್.ಎಂ.-320 ಕಬ್ಬಿನ ತಳಿಗಳನ್ನು ಸಂಶೋಧನಾ ಕೇಂದ್ರದಿಂದ ಪರಿಚಯಿಸಲಾಯಿತು. 1916ರಲ್ಲಿ ಆರಂಭವಾದ ಬಬ್ಬರೂ ಕೃಷಿ ಸಂಶೋದನಾ ಕೇಂದ್ರ ಇದವರೆಗೂ ಭತ್ತದಲ್ಲಿ 11 ತಳಿ, ಜೋಳ 5, ಮೆಕ್ಕಜೋಳ 2 ಹೈಬ್ರಿಡ್, ರಾಗಿ 5, ನವಣೆ 2, ಊದಲು 1, ಹೆಸರು 2, ಹುರಳಿ 1, ಉದ್ದು 2, ಅಲಸಂದೆ 2, ತೊಗರಿ 1, ಕಡಲೆ 12, ಕಬ್ಬು 6, ಹತ್ತಿ 18, ಮೆಣಸಿಕಾಯಿ 2, ಎಳ್ಳು 1, ಹರಳು 9, ಸೂರ್ಯಕಾಂತಿ 5, ಕುಸಬೆ 2, ಶೇಂಗಾ 7 ಮತ್ತು ಸಾಸಿವೆ 2 ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಇದುವರೆಗೂ ಸಂಶೋಧನಾ ಕೇಂದ್ರದಲ್ಲಿ 24 ಬೆಳಗಳಲ್ಲಿ 94 ತಳಿಗಳು, 69 ಬೇಸಾಯ ಕ್ರಮಗಳು, ಕೃಷಿ ತಾಂತ್ರಿಕತೆ ಮತ್ತು ಸಸ್ಯ ಸಂರಕ್ಷಣಾ ತಾಂತ್ರಿಕಗಳನ್ನು ರೈತರಿಗೆ ಶಿಫಾರಸ್ಸು ಮಾಡುವುದರೊಂದಿಗೆ ತರಬೇತಿಯನ್ನು ಸಹ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅನುಗುಣವಾಗಿ ಸಂಶೋಧನೆಗಳು ಮುಂದುವರೆದಿವೆ. ಮಾವು, ದಾಳಿಂಬೆ, ತೆಂಗು, ಅಡಿಕೆ, ಈರುಳ್ಳಿ, ಸೇವಂತಿ, ಚಂಡು ಹೂವು, ಶೇಂಗಾ, ರಾಗಿ, ಅಣಬೆ ತಳಿಗಳ ಹೊಸ ತಳಿಗಳ ಸಂಶೋಧನೆ ಕಾರ್ಯ ನಡೆಯುತ್ತಿದೆ.
ರೈತರ ಜೀವನ ಮಟ್ಟ ಸುಧಾರಣೆಗೆ ಬೆನ್ನೆಲುಬು: ಬಬ್ಬೂರು ಸಂಶೋಧನಾ ಕೇಂದ್ರ ರೈತರ ಜೀವನ ಮಟ್ಟ ಸುಧಾರಿಸಲು, ಬೆಳೆದ ಬೆಳೆಗಳಿಗೆ ಮೌಲ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸದಾ ಬದ್ದವಾಗಿದೆ. ಇಲ್ಲಿ ರೈತರಿಗೆ ತರಬೇತಿಗಳು ಹಾಗೂ ಪ್ರಾತ್ಯಕ್ಷತೆಗಳನ್ನು ಸಹ ನೀಡಲಾಗುತ್ತಿದೆ. ರೈತರಿಗೆ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಬಬ್ಬರೂ ಫಾರಂ ಕೃಷಿ ತಾಂತ್ರಿಕತೆ ವಿಭಾಗದಿಂದ ರೂಪಿಸಲಾಗಿರುವ ಸೈಕಲ್ ವೀಡರ್, ಕಾಫಿ ರೇಕರ್‍ಗಳು ರೈತರಿಗೆ ಉಪಯುಕ್ತವಾಗಿವೆ. ಇಲ್ಲಿ ರೈತರು ಬೆಳೆ ಶೇಂಗಾ ಬೆಳೆಗಳನ್ನು ಮೌಲ್ಯ ವರ್ಧನೆಯನ್ನು ರೈತರೇ ಹೆಚ್ಚಿಸಿಕೊಳ್ಳು ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲಾಗಿದೆ. ರೈತರು ಶೇಂಗಾ ಚಿಕ್ಕಿ, ಕೋಲ್ಡ್ ಪ್ರೆಸ್ ಶೇಂಗಾ ಎಣ್ಣೆ ತೆಗೆಯುಲು ಅವಕಾಶ ಮಾಡಿಕೊಡಲಾಗಿದೆ. ರೈತರು ಬೀಜ ಮಾರಾಟ ಮಾಡಲು ಬಯಸಿದರೆ ಈ ಸಂಶೋಧನಾ ಕೇಂದ್ರದಲ್ಲಿಯೇ ಅವುಗಳನ್ನು ಪ್ರಮಾಣೀಕರಿಸಿ ನೀಡಲಾಗುವುದು.
ನವ ಸಂಶೋಧನೆಗೆ ಮುನ್ನುಡಿ: ಬಬ್ಬರೂ ಕೃಷಿ ಸಂಶೋಧನಾ ಕೇಂದ್ರ ನವ ಸಂಶೋಧನೆಗೆ ಮುನ್ನಡಿ ಬರೆದಿದ್ದು, ಇಲ್ಲಿ ಅಭಿವೃದ್ಧಿ ಪಡಿಸಲಾದ ಶೇಂಗಾ ತಳಿ ಕೆ-1812 (ಕದರಿ ಲೇಪಾಕ್ಷಿ), ಯಂತ್ರ ಚಾಲಿತ ಕೋಯ್ಲಿಗೆ ಸೂಕ್ತವಾದ ಕಡಲೆ ತಳಿ ಎನ್.ಬಿ.ಇ.ಜಿ-47, ಹಾಗೂ ಬಿಳಿ ರಾಗಿ ತಳಿ, ಕೆ.ಎಂ.ಆರ್ -340 ರೈತರಲ್ಲಿ ಹೊಸ ಭರವಸೆ ಮೂಡಿಸಿವೆ. ಕದರಿ ಲೇಪಾಕ್ಷಿ ತಳಿಯು ಅಧಿಕ ಇಳುವರಿ ನೀಡುವುದರ ಜೊತೆ ಕಾಳುಗಳಲ್ಲಿ ಶೇ.51 ರಷ್ಟು ಎಣ್ಣೆ ಅಂಶವಿದೆ. ಎಲೆ ಚುಕ್ಕೆ, ತುಕ್ತು, ರಂಗೋಲಿ ಹುಳಿ, ಸ್ಪೋಡೋಪ್ಟೇರಾ ಸೇರಿದಂತೆ ಹಲವು ಕೀಟಗಳ ಬಾಧೆ ತಡೆಯ ಕ್ಷಮತೆ ಹೊಂದಿದೆ. ಹೆಚ್ಚು ಹಸಿರಾಗಿರುವ ಈ ಶೇಂಗಾ ತಳಿಯು ಮೇವನ್ನು ಕೂಡ ಒದಗಿಸಲಿದೆ. ಯಂತ್ರ ಚಾಲಿತ ಕಡಳೆ ತಳಿಯು ರೈತರಿಗೆ ಅನುಕೂಲವಾಗಿದ್ದು, ನೀರಾವರಿ ಬಿತ್ತನೆಗೆ ಸೂಕ್ತವಾಗಿದೆ. ಹೆಚ್ಚು ಮಳೆ, ಸೊರಗು ರೋಗಕ್ಕೂ ಸಹಿಷ್ಣುತೆ ಹೊಂದಿದೆ. ಅಧಿಕ ಇಳುವರಿ ಜೊತೆ ಇದರ ಕಾಳುಗಳು ಅಧಿಕ ಪ್ರೋಟಿನ್ ಹಾಗೂ ನಾರಿನ ಅಂಶವನ್ನು ಹೊಂದಿವೆ. ಇನ್ನೂ ಬಿಳಿ ರಾಗಿ ತಳಿಯು ಬೇಕರಿ ಹಾಗೂ ಮೌಲ್ಯವರ್ಧಿತ ತಿನಿಸುಗಳಗೆ ಉಪಯುಕ್ತವಾಗಿದೆ. ಬೆಳೆಯು ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ತಳಿಗಳ ಬಗ್ಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದರು.
ವಿವಿಧ ಬೆಳೆಗಳ ತಳಿ ಅಭಿವೃದ್ಧಿ : ಬಬ್ಬೂರು ಫಾರಂ ಕಳೆದ ನೂರು ವರ್ಷಗಳ ಅವಧಿಯಲ್ಲಿ 24 ಬೆಳೆಗಳಲ್ಲಿ 94 ತಳಿಗಳು ಮತ್ತು ಸಂಕಿರಣ ತಳಿಗಳನ್ನು ಹಾಗೂ 69 ಬೇಸಾಯ ಕ್ರಮಗಳು, ಕೃಷಿ ತಾಂತ್ರಿಕತೆ ಮತ್ತು ಸಸ್ಯ ಸಂರಕ್ಷಣಾ ತಾಂತ್ರಿಕತೆಗಳನ್ನು ರೈತರಿಗೆ ಶಿಫಾರಸು ಮಾಡಲಾಗಿದೆ. ವಿವಿಧ ಬೆಳೆಗಳ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಭತ್ತದಲ್ಲಿ 11 ತಳಿ, ಜೋಳ-05, ಗೋವಿನ ಜೋಳ-02 ಸಂಕರಣ ತಳಿಗಳನ್ನು ಪರಿಚಯಿಸಲಾಗಿದೆ.
ಸಿರಿಧಾನ್ಯಗಳಾದ ರಾಗಿಯಲ್ಲಿ 05 ತಳಿ, ನವಣೆ-02, ಊದಲು-01, ದ್ವಿದಳ ಬೆಳೆಗಳಾದ ಹೆಸರು-02, ಹುರುಳಿ-01, ಉದ್ದು-02, ಅಲಸಂದಿ-02, ತೊಗರಿ-01 ಮತ್ತು ಕಡಲೆಯಲ್ಲಿ 12 ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳಾದ ಕಬ್ಬು ಬೆಳೆಯಲ್ಲಿ -06 ತಳಿಗಳು, ಹತ್ತಿ-18, ಮೆಣಸಿನಕಾಯಿ-02 ತಳಿಗಳ ಸಂಶೋಧನೆ ಮಾಡಿ, ರೈತರಿಗೆ ಬೆಳೆಯಲು ಶಿಫಾರಸು ಮಾಡಲಾಗಿದೆ. ಎಳ್ಳು-01, ಹರಳು-09, ಸೂರ್ಯಕಾಂತಿ-05, ಕುಸುಬೆ-02, ಶೇಂಗಾ-07, ಸಾಸಿವೆ-02 ತಳಿಗಳನ್ನು ಶಿಫಾರಸು ಮಾಡಲಾಗಿದೆ. ವಿವಿಧ ಬೇಸಾಯ ಕ್ರಮಗಳು ಮತ್ತು ಸಸ್ಯ ಸಂರಕ್ಷಣಾ ತಾಂತ್ರಿಕತೆಗಳನ್ನು ಆಯಾ ಸಂದರ್ಭದಲ್ಲಿ ತಕ್ಕಂತೆ ಕೇಂದ್ರದಿಂದ ಬಿಡುಗಡೆಗೊಳಿಸಲಾಗಿದೆ.
ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಈರುಳ್ಳಿ, ಮಾವು ಮತ್ತು ದಾಳಿಂಬೆಗಳಲ್ಲಿ ಸಂಶೋಧನೆ ನಡೆಸಿ, ಉತ್ಕøಷ್ಟವಾದ ಸಸಿಗಳನ್ನು ಉತ್ಪಾದಿಸಿ ರೈತರಿಗೆ ಮಾರಾಟ ಮಾಡಲಾಗಿದೆ. ಬಬ್ಬೂರು ಫಾರಂ ನಲ್ಲಿ ಕೃಷಿ ತಾಂತ್ರಿಕತೆಯ ವಿಭಾಗದಿಂದ ಬಿಡುಗಡೆ ಮಾಡಿರುವ ಸೈಕಲ್ ವೀಡರ್ ಮತ್ತು ಕಾಫಿ ರೇಕರ್ ತಾಂತ್ರಿಕತೆಗಳು ರೈತರಿಗೆ ಉಪಯುಕ್ತವಾಗಿವೆ ಎಂದರು.
ತೋಟಗಾರಿಕೆ ವಿಶ್ವವಿದ್ಯಾಲಯದೊಂದಿಗೆ ಸಮ್ಮಿಳನ: ಸ್ವಾತಂತ್ರ ಪೂರ್ವದಲ್ಲಿ ಕೃಷಿ ಸಂಶೋಧನಾ ಕೇಂದ್ರವಾಗಿ ಆರಂಭವಾದ ಹಿರಿಯೂರಿನ ಬಬ್ಬೂರು ಕೃಷಿ ಸಂಶೋಧನಾ ಕೇಂದ್ರ, ಸ್ವಾತಂತ್ರ ನಂತರ 1965 ವರೆಗೆ ಕೃಷಿ ಇಲಾಖೆಯ ಬೀಜೋತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಡಳಿತಕ್ಕೆ ಒಳಪಟ್ಟು ಕೃಷಿ ಸಂಶೋಧನಾ ಕೇಂದ್ರವಾಗಿ ಪರಿವರ್ತಿತವಾಯಿತು. 2008ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಪ್ರಸ್ತುತ 2013ರಲ್ಲಿ ಸ್ಥಾಪನೆಯಾದ ಕೆಳದ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತಕ್ಕೆ ಒಳಪಟ್ಟಿದೆ. ಇದರೊಂದಿಗೆ ಹಿರಿಯೂರು ನಗರದಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಕಾಲೇಜಿನೊಂದಿಗೆ ಸಮ್ಮಿಳನಗೊಂಡಿದೆ.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಇದುವರೆಗೂ 600 ಸ್ನಾತಕೋತ್ತರ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಸದ್ಯ 369 ವಿದ್ಯಾರ್ಥಿಗಳು ಓದುತ್ತಿದಾರೆ. ಇಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸ ಲಭಿಸುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಕಿರಿಯ ಸಂಶೋಧನಾ ಫೆಲೋಶಿಫ್ ಪಡೆದಿದ್ದಾರೆ. ಕೆಲವರು ವಿಜ್ಞಾನಿಗಳಾಗಿದ್ದಾರೆ, ಕೆಲವರು ಸ್ವಂತ ಉದ್ದಿಮೆಗಳನ್ನು ತರೆದು ರಾಜ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಕೆ.ಮಂಜಪ್ಪ, ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸುರೇಶ್ ಡಿ. ಏಕಬೋಟೆ, ಹಿರಿಯ ವಿಜ್ಞಾನಿಗಳಾದ ಡಾ.ಒ.ಕುಮಾರ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ, ಡಾ.ಓಂಕಾರಪ್ಪ, ಅವರು ಉಪಸ್ಥಿತರಿದ್ದರು.