ಪೇಶಾವರ: ಪಾಕಿಸ್ತಾನದಲ್ಲಿ ಸದ್ಯ 18.68 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ 22.10 ಲಕ್ಷಕ್ಕೂ ಅಧಿಕ ಮಂದಿ ಅಲ್ಪಸಂಖ್ಯಾತ ಹಿಂದೂಗಳಿದ್ದಾರೆ ಎಂದು ವರದಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ ಶಾಂತಿ ಮತ್ತು ನ್ಯಾಯ ಕೇಂದ್ರದ ವರದಿ ಈ ವಿಚಾರ ತಿಳಿಸಿದೆ.
ರಾಷ್ಟ್ರೀಯ ಅಂಕಿ ಅಂಶ ಮತ್ತು ನೋಂದಣಿ ಪ್ರಾಧಿಕಾರದ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆ ಪೈಕಿ ಶೇಕಡ 5ಕ್ಕಿಂತ ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತರು ವಾಸವಾಗಿದ್ದು, ಅವುಗಳಲ್ಲಿ ಶೇಕಡ 1.18ರಷ್ಟಿರುವ ಹಿಂದೂಗಳದ್ದು ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಈ ವರ್ಷದ ಮಾರ್ಚ್‌ವರೆಗೆ ದೇಶದಲ್ಲಿ ಒಟ್ಟು ಜನಸಂಖ್ಯೆ 18,68,90,601 ರಷ್ಟಿದೆ ಎಂದು ನೋಂದಾವಣೆಯಾಗಿದ್ದು, ಇದರಲ್ಲಿ 18,25,92,000 ಮಂದಿ ಮುಸ್ಲಿಮರಾಗಿದ್ದಾರೆ. ಎನ್‌ಎಡಿಆರ್‌ಎಯಿಂದ ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿಗೆ (ಸಿಎನ್‌ಐಚಿ) ಸಂಗ್ರಹಿಸಿರುವ ಡೇಟಾ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಲಾಗಿದೆ.
ನೋಂದಾವಣೆ ಮಾಡಿಕೊಂಡಿರುವ ಹಿಂದೂಗಳ ಸಂಖ್ಯೆ 22,10,566 ಆಗಿದ್ದು, ಕ್ರಿಶ್ಚಿಯನ್ನರು 18,73,348, ಅಹಮದೀಯರು 1,88,340,ಸಿಖ್ಖರು 74,130 ಮತ್ತು 3,917 ಮಂದಿ ಪಾರ್ಸಿಗಳಿದ್ದಾರೆ ಎಂದು ಪಾಕಿಸ್ತಾನ 3 ರಾಷ್ಟ್ರೀಯ ಜನಗಣತಿಯಲ್ಲಿ ತಿಳಿದುಬಂದಿದೆ.