ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.17 : ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದಿರುವ ಕೋಟೆ ನಾಡಿನ ಹಿಂದೂ ಮಹಾಗಣಪತಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಇಂದು ಮಧ್ಯಾನ್ಹ 3:30 ಗಂಟೆಗೆ ಹಿಂದೂ ಮಹಾಗಣಪತಿಯ ಪುರಪ್ರವೇಶಕ್ಕೆ ಕೋಟೆನಾಡು ಸಜ್ಜಾಗಿದೆ. ಈಗಾಗಲೇ ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 13 ಅಡಿ ಎತ್ತರದ ಗಣೇಶಮೂರ್ತಿ ತಯಾರಾಗಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಬಂದು ತಲುಪಲಿದೆ. ಅಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಪ್ರಮುಖ ಮಠಾಧೀಶರು ಅದ್ದೂರಿಯಾಗಿ ಮೂರ್ತಿಯನ್ನು ಸ್ವಾಗತಿಸಲಾಗುತ್ತದೆ. ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಿದ ಬಳಿಕ ಮೆರವಣಿಗೆ ಮೂಲಕ ಬಿ.ಡಿ. ರಸ್ತೆಯ ಜೈನಧಾಮಕ್ಕೆ ಪುರ ಪ್ರವೇಶಿಸಲಿದೆ.
ಬೆಳಿಗ್ಗೆಯಿಂದಲೇ ಮಾದಾರ ಚನ್ನಯ್ಯ ಸ್ವಾಮೀಜಿ ಗುರುಪೀಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಆಗಮಿಸುವರು. ಬೃಹತ್ ಗಾತ್ರದ ಗಣಪತಿ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ.
ಸಖತ್ ವೈರಲ್ ಆದ ಪುರಪ್ರವೇಶದ ಪೋಸ್ಟರ್ :
ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಪುರ ಪ್ರವೇಶದ ಈ ಪೋಸ್ಟರ್ ಶನಿವಾರ ಸಂಜೆಯಿಂದಲೇ ಎಲ್ಲರ ಮೊಬೈಲ್ ಗಳಲ್ಲಿ, ವಾಟ್ಸಾಪ್, ಫೇಸ್‍ಬುಕ್, ಇನ್ಸ್ಟಾಗ್ರಾಮ್ ಗಳ ಡಿಪಿ, ಸ್ಟೇಟಸ್, ಪ್ರೊಫೈಲ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದ್ದುದು ಕಂಡು ಬಂತು. ಪ್ರತಿಷ್ಠಾಪನೆ ಆದ ದಿನದಿಂದ ಶೋಭಾಯಾತ್ರೆಯ ದಿನದ ವರೆಗೂ ಜಿಲ್ಲೆಯ ಜನರಷ್ಟೇ ಅಲ್ಲದೇ ಹೊರ ಜಿಲ್ಲೆಯ ಬಹುತೇಕರು ಹಿಂದೂ ಮಹಾ ಗಣಪತಿಯ ಫೋಟೋ ವಿಡಿಯೋವನ್ನು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮದಿಂದ ಭಕ್ತಿಯಿಂದ ಆರಾಧಿಸುತ್ತಾರೆ.
ಹಿಂದೂ ಮಹಾ ಗಣಪತಿಯನ್ನು ಸೆಪ್ಟೆಂಬರ್ 18 ರಂದು ಪ್ರತಿಷ್ಠಾಪಿಸಿ, ಅಕ್ಟೋಬರ್ 8 ರಂದು ಶೋಭಾಯಾತ್ರೆ ಮೂಲಕ ಗಣೇಶನ ವಿಸರ್ಜನೆ ಮಾಡಲಾಗುತ್ತದೆ.