ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.07 : ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಐತಿಹಾಸಿಕ ಚಿತ್ರದುರ್ಗವನ್ನು ಕೇಸರಿಕರಣಗೊಳಿಸಲಾಗಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಎಸ್.ಆರ್.ಪ್ರಭಂಜನ್ ತಿಳಿಸಿದರು.
ಹಿಂದೂ ಮಹಾಗಣಪತಿ ಪೆಂಡಾಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರದ ಶೋಭಾಯಾತ್ರೆಗೆ ಸಿದ್ದತೆಗಳನ್ನು ಕೈಗೊಂಡಿದ್ದು, ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆಯಿದೆ. ಬೆಳಿಗ್ಗೆ 10 ಗಂಟೆಗೆ ಮಹಾರಾಷ್ಟ್ರ ಕೊಲ್ಲಾಪುರದ ಕನ್ನೇರಿಮಠ್ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಮೆರವಣಿಗೆ ಉದ್ಘಾಟಿಸಲಿದ್ದು, ಹನ್ನೆರಡಕ್ಕೂ ಹೆಚ್ಚು ಸ್ವಾಮೀಜಿಗಳು ಶೋಭಾಯಾತ್ರೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ವಿಶೇಷ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕಷ್ಟು ಕಾರ್ಯಕರ್ತರು, ಜನಸಾಮಾನ್ಯರು ಕೆಲಸ ಮಾಡಿದ್ದಾರೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಮಾತನಾಡಿ ಬೃಹತ್ ಶೋಭಾಯಾತ್ರೆಗೆ ಚಿತ್ರದುರ್ಗದಲ್ಲಿ ಅಲಂಕಾರ ಮಾಡಿರುವುದನ್ನು ನೋಡಿ ಗ್ರಾಮೀಣ ಪ್ರದೇಶಗಳಿಂದ ತಂಡೋಪ ತಂಡವಾಗಿ ಜನ ಆಗಮಿಸಿ ಹಿಂದೂ ಮಹಾಗಣಪತಿಯ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿ ಹೆಚ್ಚಿನ ಜನ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಅಲಂಕಾರ ಆಕರ್ಷಣೀಯವಾಗಿರುವುದರಿಂದ ಸಾಗರೋಪಾದಿಯಲ್ಲಿ ಜನ ಬರುತ್ತಾರೆ. ಹದಿನೇಳು ವರ್ಷಗಳಿಂದ ಹಿಂದೂ ಮಹಾಗಣಪತಿಗೆ ಬರದವರು ಈ ಸಾರಿ ಬಂದಿದ್ದಾರೆ. ವರ್ಷ ವರ್ಷಕ್ಕೂ ಹಿಂದೂ ಮಹಾಗಣಪತಿ ಒಂದು ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮುಖಂಡ ಟಿ.ಬದ್ರಿನಾಥ್, ಷಡಾಕ್ಷರಪ್ಪ, ಸಂದೀಪ್, ಪಿ.ರುದ್ರೇಶ್, ರಂಗಸ್ವಾಮಿ, ಕಿರಣ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.