ಬೆಂಗಳೂರು: ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಅನ್ನೋದು ಎಲ್ಲರ ಅಪೇಕ್ಷೆ. ಯಾರೋ ಕಿಡಿಗೇಡಿಗಳು ಇದನ್ನು ಅಡ್ಡಿ ಮಾಡುವಂತ ಪ್ರಯತ್ನ ಮಾಡಿದ್ರೆ, ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂಥವರ ಮೇಲೆ ಕಾನೂನಿನ ಕ್ರಮ ತೆಗೆದಕೊಳ್ಳುತ್ತೇನೆ. ಇನ್ನು ಮುಂದೆಯಾದರು ಅಹಿತಕರ ಘಟನೆ ನಡೆಯದಂತೆ ಒಟ್ಟಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಡಬೇಕು.
ಇಂಥ ಘಟನೆಗಳನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ. ಈಗಾಗಲೇ ಸಿಎಂ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ನಾನು ಸಹ ಕಿವಿ ಮಾತನ್ನು ಹೇಳೋದಕ್ಕೆ ಇಷ್ಟಪಡ್ತೀನಿ. ಇಲ್ಲಿಗೆ ಎಲ್ಲವನ್ನು ನಿಲ್ಲಿಸಿ ನಿಮ್ ನಿಮ್ಮ ಕೆಲಸ ಮಾಡಿ. ಅವರು ಸಹ ಗೌರವ, ನೆಮ್ಮದಿಯಿಂದ ಬದುಕಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಇನ್ನು ರಾಜ್ಯಪ್ರವಾಸದ ಬಗ್ಗೆ ಮಾತನಾಡಿ, ಮೂರು ತಂಡಗಳಾಗಿ 12 ರಿಂದ 24ನೇ ತಾರೀಖಿನವರೆಗೆ ರಾಜ್ಯ ಪ್ರವಾಸವನ್ನು ಮಾಡುತ್ತಿದ್ದೇವೆ. ಮೊದಲ ತಂಡ ನಳೀನ್ ಕುಮಾರ್ ಕಟೀಲ್, ಎರಡನೇ ತಂಡದಲ್ಲಿ ನಾನು ಜೊತೆಗಿರುತ್ತೇನೆ, ಮೂರನೇ ತಂಡದಲ್ಲಿ ಬಸವರಾಜ್ ಬೊಮ್ಮಾಯಿ ಇರ್ತಾರೆ. ಪಕ್ಷವನ್ನು ಬಲಪಡಿಸೋ ದೃಷ್ಟಿಯಿಂದ ವಿಶೇಷವಾಗಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ ಈ ಪ್ರವಾಸ ಮಾಡುತ್ತಿದ್ದೇವೆ ಎಂದಿದ್ದಾರೆ.