ರಾಮನಗರ: ಕೊರೊನಾದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಈಗಾಗಲೇ ತೊಂದರೆಯಾಗಿದೆ. ಸರಿಯಾಗಿ ತರಗತಿಗಳು ನಡೆದಿಲ್ಲ. ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬೇರೆ ಹತ್ತಿರವಿದೆ. ಈ ಮಧ್ಯೆ ಹಿಜಾಬ್ ವಿವಾದ ರಾಜ್ಯದಲ್ಲಿ ಜೋರಾಗಿಯೇ ಭುಗಿಲೆದ್ದಿದೆ. ಈ ಹಿನ್ನೆಲೆ ರಾಮನಗರದಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ನಿನ್ನೆಯಷ್ಟೇ ಕಾಲೇಜುಗಳು ಪುನರಾರಂಭಗೊಂಡಿವೆ. ಈ ಮಧ್ಯೆ ಅಲ್ಲಲ್ಲಿ ಹಿಜಾಬ್ ಬಗ್ಗೆ ಗೊಂದಲ, ಮಾತಿನ ಚಕಮಕಿ ನಡೆಯುತ್ತಲೆ ಇದೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಪುನರಾರಂಭವಾದ ಮೊದಲ ದಿನವೇ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆಡಳಿತ ಮಂಡಳಿ ಎಷ್ಟೇ ಹೇಳಿದ್ರು ಹಿಜಾಬ್ ತೆಗೆಯಲಿಲ್ಲ.

ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಮುಂದಿನ ಆದೇಶದ ತನಕವೂ ಆನ್ಲೈನ್ ಕ್ಲಾಸ್ ನಡೆಸುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.

