ಬೆಂಗಳೂರು: ಬಿಜೆಪಿ ಸರ್ಕಾರವಿದ್ದಾಗ ಹಿಜಾಬ್ ಧರಿಸುವುದನ್ನು ನಿಷೇಧ ಮಾಡಲಾಗಿತ್ತು. ಈ ವಿಚಾರ ಇಡೀ ದೇಶದಲ್ಲಿಯೇ ಸದ್ದು ಮಾಡಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹಿಜಾಬ್ ನಿಷೇಧದ ಆದೇಶವನ್ನು ಹಿಂಪಡೆಯುವ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದ್ದು, ಅವರು ಮುಖ್ಯಮಂತ್ರಿ. ಕೆಲವೊಂದು ವಿಚಾರದಲ್ಲಿ ಸರ್ವ ಸ್ವತಂತ್ರರು. ಹಾಗೆಂದ ಮಾತ್ರಕ್ಕೆ ಈ ನಿರ್ಧಾರ ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ. ಅಲ್ಪಸಂಖ್ಯಾತರ ಮತಗಳ ಒಲೈಕೆಗೆ ಸಿಎಂ ಹೀಗೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಮೈಸೂರಿನಲ್ಲಿ ಹಿಜಾಬ್ ಸಂಬಂಧ ಹೇಳಿಕೆ ನೀಡಿದ್ದರು. ಉಡುಪು ಧರಿಸುವುದು ಅವರವರ ಇಷ್ಟ. ಹೀಗಾಗಿ ಹಿಜಾಬ್ ನಿಷೇಧವನ್ನು ಹಿಂಪಡೆಯಲು ನಾನು ಹೇಳಿದ್ದೇನೆ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬರೀ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಹೇಳಿದ್ದೀನಿ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.