ಬೆಂಗಳೂರು: ಇಷ್ಟು ವರ್ಷ ಬಿಜೆಪಿಯಲ್ಲೇ ಇದ್ದಂತ ಜಗದೀಶ್ ಶೆಟ್ಟರ್ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಯಾಗಿ ನಿರೀಕ್ಷಿತ ಕ್ಷೇತ್ರಕ್ಕೆ ಟಿಕೆಟ್ ಕೂಡ ಪಡೆದಿದ್ದಾರೆ. ಆದ್ರೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಮಾತ್ರ ಈ ಬಾರಿ ಹೈವೋಲ್ಟೇಜ್ ಪಂದ್ಯವಾಗಲಿದೆ ಎಂಬುದಂತು ಖಚಿತವಾಗಿದೆ.

ಸದ್ಯ ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ನಡೆಸಿದ್ರೆ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಸ್ಪರ್ಧೆಯೊಡ್ಡಿದ್ದಾರೆ. ಈಗಾಗಲೇ ಬಿಜೆಪಿಗೆ ಇದರ ನಡುಕ ಶುರುವಾಗಿದೆ. ಕಾಂಗ್ರೆಸ್ ಲಿಂಗಾಯತ ಮತ ಸೆಳೆಯಲು ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿ, ಸ್ಪರ್ಧೆಗೆ ಇಳಿಸಿದೆ. ಈ ಕಾರಣಕ್ಕಾಗಿಯೇ ಬಿಜೆಪಿಗೆ ಆತಂಕ ಶುರುವಾಗಿದ್ದು, ಕಿತ್ತೂರು ಭಾಗದಲ್ಲಿ ಸ್ಥಾನ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹೀಗಾಗಿ ಜೆಪಿ ನಡ್ಡಾ ಹುಬ್ಬಳ್ಳಿ ಕಡೆಗೆ ಪಯಣ ಬೆಳೆಸಿದ್ದಾರೆ.

ರಾಜ್ಯದಲ್ಲಿ ಜೆಪಿ ನಡ್ಡಾ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ ಸಂಜೆ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ನಡೆಯುವ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸುವುದರ ಜೊತೆಗೆ, ಹುಬ್ಬಳ್ಳಿ – ಧಾರವಾಡದ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ನಾಡಿದ್ದು, ಸಿದ್ದರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ.

