ಚಿತ್ರದುರ್ಗ, (ಏ.18) : 30 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಮತ್ತು ಮೊಳಕಾಲ್ಮೂರಿನಲ್ಲೂ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು
ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ನೂತನ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಹೊಳಲ್ಕೆರೆ ಪ್ರಮುಖ ಪಟ್ಟಣ ಕೇಂದ್ರವಾಗಿದೆ. ಇಲ್ಲಿಂದ ಶಿವಮೊಗ್ಗ,ಉಡುಪಿ,ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿಗೆ ಸಂಪರ್ಕ ರಸ್ತೆಗಳಿವೆ. 9 ಕೋಟಿ ವೆಚ್ಚದಲ್ಲಿ ಹೊಳಲ್ಕೆರೆ ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ.
ಸ್ವತಃ ಮುತುವರ್ಜಿ ವಹಿಸಿ ಅಧಿಕಾರಿಗಳಿಗೆ ಬಸ್ ನಿಲ್ದಾಣದ ನೀಲನಕ್ಷೇ ರೂಪಿಸಲು ಸೂಚಿಸಿದ್ದೆ. ನಿಲ್ದಾಣದಲ್ಲಿ ಏಕ ಕಾಲದಲ್ಲಿ 50 ಬಸ್‌ಗಳ ನಿಲುಗಡೆ ಸ್ಥಳಾವಕಾಶವಿದೆ. ಸಂಚಾರಿ ದಟ್ಟಣೆಗೆ ಆಸ್ಪದವಿಲ್ಲ.
ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳಿಗೂ ನಿಲ್ದಾಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು. ಹೊಳಲ್ಕೆರೆ ಹಾಗೂ ಚನ್ನಗಿರಿಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡಲಾಗುವುದು.
6 ಕೋಟಿ ವೆಚ್ಚದಲ್ಲಿ ಹಿರಿಯೂರಿನಲ್ಲಿ ನಿರ್ಮಿಸಲಾಗಿರುವ ಬಸ್ ಡಿಪೋವನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದರು.
ಸಂಸ್ಥೆ ವ್ಯಾಪ್ತಿಯಲ್ಲಿ 1.30 ಲಕ್ಷ ನೌಕರರು ಇದ್ದಾರೆ. 30 ಸಾವಿರ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್‌ನಿಂದಾಗಿ ಸಂಸ್ಥೆ ನಷ್ಟದಲ್ಲಿದೆ.
ನೌಕರರ ವೇತನ ಹಾಗೂ ಡೀಸೆಲ್ ಖರೀದಿಗಾಗಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಡಲಾಗಿತ್ತು. ಇದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ಸರ್ಕಾರದಿಂದ 200 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ವತಿಯಿಂದ 500 ಕೋಟಿ ವೆಚ್ಚದಲ್ಲಿ 500 ನೂತನ ಬಸ್‌ಗಳನ್ನು ಖರೀದಿ ಮಾಡಲಾಗುವುದು. ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಸಂಸ್ಥೆ ಲಾಭದ ಹಾದಿಗೆ ಮರಳಲಿದೆ ಎಂಬ ವಿಶ್ವಾಸವನ್ನು ಎಂ.ಚಂದ್ರಪ್ಪನವರು ವ್ಯಕ್ತಪಡಿಸಿದರು.