ಚಿಕ್ಕಮಗಳೂರು: ಜಿಲ್ಲೆಯ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ವಿಚಾರಣೆಯನ್ನು 3 ವಾರಗಳ ಕಾಲ ಮುಂದೂಡಿದೆ.
ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮುಜಾವರ್ ಜತೆ ಆಗಮ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರವೇ ತೀರ್ಮಾನಿಸಿತ್ತು. ಈ ಸಂಬಂಧ ಕಳೆದ ಆಗಸ್ಟ್ 19ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರ, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತಿನಿಧಿಗಳು ಇರುವ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಅರ್ಚಕ ಮತ್ತು ಮುಜಾವರ್ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದಲೇ ನೇಮಿಸಬೇಕು ಎಂದು ಹೇಳಿತ್ತು.
ಇನಾಂ ದತ್ತಪೀಠದ ಗುಹೆಯ ಒಳಗೆ ನಂದಾದೀಪ ಬೆಳಗಿಸುವುದು. ದತ್ತಾತ್ರೇಯ ಪೀಠ, ಪಾದುಕೆಗಳಿಗೆ ಹೂ ಸಮರ್ಪಿಸಿ ನಿತ್ಯದ ಧಾರ್ಮಿಕ ವಿಧಿವಿಧಾನ ನಿರ್ವಹಿಸಬೇಕು. ಇದಕ್ಕಾಗಿ ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ವ್ಯವಸ್ಥಾಪನಾ ಸಮಿತಿ ನೇಮಿಸಬೇಕು ಎಂದು ಹೇಳಿತ್ತು. ಇದೇ ಸಮಿತಿಯು ಮುಸ್ಲಿಂ ಧಾರ್ಮಿಕ ವಿಧಿಗಳನ್ನು ಬಲ್ಲ ಮುಜಾವರ್ ಅವರನ್ನೂ ಪೀಠದ ಕೈಂಕರ್ಯಕ್ಕೆ ನೇಮಿಸಬೇಕು. ಮುಜಾವರ್ ಅವರು ಪ್ರತಿ ಸೋಮವಾರ ಮತ್ತು ಗುರುವಾರದ ನಮಾಜ್ ನಂತರ ಹಾಗೂ ಪ್ರತಿದಿನ ಸಂಜೆ ದರ್ಗಾದಲ್ಲಿ ಲೋಬಾನ ಹಾಕಿ, ಫಾತೇಹ್ ಅರ್ಪಿಸಬೇಕು ಎಂದು ಸರ್ಕಾರದ ಸುತ್ತೋಲೆಯು ಸೂಚಿಸಿತ್ತು.