ಬೆಂಗಳೂರು: ಈ ಬಾರಿಯ ದಸರಾ ಉದ್ಘಾಟನೆ ಮಾಡುವುದಕ್ಕೆ ರಾಜ್ಯ ಸರ್ಕಾರವೂ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ ಅವರನ್ನು ಆಯ್ಕೆ ಮಾಡಿತ್ತು. ಅಂದಿನಿಂದಲೂ ಬಿಜೆಪಿ ನಾಯಕರು ಸೇರಿದಂತೆ ಹಲವರು ಸರ್ಕಾರದ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಾಪ್ ಸಿಂಹ ಸೇರಿದಂತೆ ಹಲವರು ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅದರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಇಂದು ಕರ್ನಾಟಕ ಹೈಕೋರ್ಟ್ ಅರ್ಜಿ ವಿಚಾರಣರ ನಡೆಸಿದ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠವೂ ಅರ್ಜಿ ವಿಚಾರಣೆ ನಡೆಸಿದ್ದು, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡು ಬಂದಿಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತೀರ್ಪು ನೀಡಿದೆ. ಈ ಮೂಲಕ ಬಾನು ಮುಷ್ತಾಕ ಅವರು ಉದ್ಘಾಟನೆ ಮಾಡಬಾರದು ಎಂದು ಅಭಿಪ್ರಾಯ ಪಟ್ಟಿದ್ದವರಿಗೆ ಹಿನ್ನಡೆಯಾಗಿದೆ. ಬಾನು ಮುಷ್ತಾಕ ಅವರೇ ದಸರಾ ಉದ್ಘಾಟನೆ ಮಾಡುವ ಬಗ್ಗೆ ಹೈಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದಂತೆ ಆಗಿದೆ.
ಬಾನು ಮುಷ್ತಾಕ ಅವರು ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಕನ್ನಡಾಂಭೆಯ ಅರಿಶಿನ ಕುಂಕುಮದ ಬಗ್ಗೆ ನೀಡಿದ್ದ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಆ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅವರಿಗೆ ತಾಯಿ ಚಾಮುಮನಡೇಶ್ವರಿ ಮೇಲೆ ನಂಬಿಕೆಯೇ ಇಲ್ಲ. ಅವರ ಆಲೋಚನೆಯೇ ಬೇರೆ ಎಂಬ ವಿರೋಧವಿತ್ತು. ಒಂದು ವೇಳೆ ಅವರೇ ಉದ್ಘಾಟನೆಯನ್ನು ಮಾಡಬೇಕಾದರೆ ಅವರು ಹಣೆಗೆ ಕುಂಕುಮವಿಟ್ಟು ಬರಬೇಕು ಎಂಬ ಬೇಡಿಕೆಗಳನ್ನ ಇಡಲಾಗಿತ್ತು. ಆದರೆ ಈಗ ಈ ಸಂಬಂಧ ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಂಡಿದೆ.






