ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಸಿಬಿಐ ವಿಚಾರಣೆ ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೈಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣವನ್ನು ರದ್ದು ಮಾಡುವುದಿಲ್ಲ. ಸಿಬಿಐ ತನಿಖೆಯನ್ನು ಮುಂದುವರೆಸಲಿದೆ. ಮೂರು ತಿಂಗಳಲ್ಲಿ ಸಿಬಿಐ ತನಿಖೆಯನ್ನು ಮುಗಿಸಬೇಕು. ತನಿಖೆ ತಡವಾದರೆ ಕೋರ್ಟ್ ಮತ್ತೆ ಆದೇಶ ಮಾಡಬಹುದು. ಡಿಕೆ ಶಿವಕುಮಾರ್ ಕೋರ್ಟ್ ಗೆ ತಡವಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಸಿಬಿಐ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆಪಾದನೆ ಸಂಬಂಧ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ, ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ, ಡಿಸಿಎಂ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಏಪ್ರಿಲ್ ನಲ್ಲಿಯೇ ಪೂರ್ಣಗೊಂಡಿತ್ತು. ನ್ಯಾ. ಕೆ ನಟರಾಜನ್ ಅವರ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಹೈಕೋರ್ಟ್ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಹೊರಡಿಸಿದೆ. 2014-18 ರ ಸಮಯದಲ್ಲಿ ಆಸ್ತಿ ಗಳಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಡಿಕೆಶಿ ವಿರುದ್ಧ ಕೇಸ್ ದಾಖಲಿಸಿದ್ದ ಸಿಬಿಐ ತನಿಖೆ ಆರಂಭಿಸಿತ್ತು.
ನಂತರದಲ್ಲಿ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಕೆ ಮಾಡಿದ್ದರು. ಸಿಬಿಐ ತನಿಖೆ ರದ್ದು ಮಾಡಬೇಕು ಎಂದೇ ಮನವಿ ಮಾಡಿದ್ದರು. ಡಿಕೆ ಶಿವಕುಮಾರ್ ಪರ ಉದಯ್ ಹೊಳ್ಳ, ಸಂದೇಶ್ ಚೌಟ ವಾದ ಮಂಡಿಸಿದರೆ ಸಿಬಿಐ ಪರ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಇದೀಗ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿದ್ದಂತ ಅರ್ಜಿಯನ್ನು ವಜಾ ಮಾಡಲಾಗಿದೆ.