ಬೆಂಗಳೂರು: ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕನಿಗೆ ಹೈಕೋರ್ಟ್ ಇಂದು ಶಾಕ್ ನೀಡಿದೆ. ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆಯನ್ನೇ ಅಸಿಂಧು ಎಂದು ಘೋಷಣೆ ಮಾಡಿದೆ. ನ್ಯಾ.ಎಂ.ಜಿ.ಎಸ್ ಕಮಲ್ ಅವರಿದ್ದ ಹೈಕೋರ್ಟ್ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಆಯ್ಕೆಯನ್ನು ಅಸಿಂಧು ಎಂದು ಆದೇಶ ನೀಡಿದೆ. ಚುನಾವಣಾ ಅಕ್ರಮಗಳ ಹಿನ್ನಲೆಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.
ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಕೋರಿ ಚುನಾವಣಾ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಸಿ.ಮುನಿರಾಜು ವಿಜಯಿ ಎಂದು ಘೋಷಣೆ ಮಾಡುವುದಕ್ಕೆ ಹೈಕೋರ್ಟ್ ನಕಾರ ಮಾಡಿದೆ. ಮೇಲ್ಮನವಿ ಸಲ್ಲಿಕೆವರೆಗೆ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಎಸ್.ಎನ್.ಸುಬ್ಬಾರೆಡ್ಡಿ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ಮನವಿ ಮಾಡಿದ್ದರು. ಆದರೇ, ಈ ಮನವಿಗೆ ಅರ್ಜಿದಾರರ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಗೆ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಲು ಎಸ್ ಎನ್ ಸುಬ್ಬಾರೆಡ್ಡಿ ಅವರಿಗೆ ಅವಕಾಶ ಇದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ 6 ತಿಂಗಳ ಒಳಗೆ ತಡೆಯಾಜ್ಞೆ ನೀಡದಿದ್ದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕಾಗುತ್ತದೆ. ಇನ್ನು ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ ಆದೇಶವನ್ನು ಚುನಾವಣಾ ಆಯೋಗಕ್ಕರ ರವಾನೆ ಮಾಡಲು ಹೈಕೋರ್ಟ್ ಆದೇಶ ನೀಡಿದೆ. ವಿಧಾನಸಭೆಯ ಕಾರ್ಯದರ್ಶಿಗೂ ಈ ಆದೇಶ ಪ್ರತಿಯನ್ನು ಕಳುಹಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸುಬ್ಬಾರೆಡ್ಡಿ ತಮ್ಮ ತಪ್ಪಿಲ್ಲ ಎಂದು ಪ್ರೂವ್ ಮಾಡಿಕೊಳ್ಳಲು ಹೇಗೆ ಹೋರಾಡುತ್ತಾರೆ ಎಂಬುದನ್ನ ನೋಡಬೇಕಿದೆ. ಇದರ ನಡುವೆ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರನ್ನು ಆಯ್ಕೆ ಮಾಡುತ್ತಾ ಎಂಬುದನ್ನ ನೋಡಬೇಕಿದೆ.


