ಇನ್ನು ಮುಂದೆ ಅವರಿಗೆಲ್ಲಾ ಪೂರ್ಣ ಪಿಂಚಣಿ : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಸುದ್ದಿಒನ್, ನವದೆಹಲಿ, ಆಗಸ್ಟ್. 24 : ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಗೆ ಶನಿವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 25 ವರ್ಷ ಕೆಲಸ ಮಾಡುವ ನೌಕರನಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಈ ಯುಪಿಎಸ್ ಯೋಜನೆಯ ಮೂಲಕ 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಯುಪಿಎಸ್, ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.

1. ಖಚಿತವಾದ ಪಿಂಚಣಿ (Assured pension) : ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡುತ್ತದೆ.

2. ಕುಟುಂಬ ಪಿಂಚಣಿ (Family pension) :
ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಪತ್ನಿಯರಿಗೆ ಶೇ.60ರಷ್ಟು ಪಿಂಚಣಿ ನೀಡಲಾಗುವುದು.

3. ಕನಿಷ್ಠ ಪಿಂಚಣಿ (Minimum pension) : ಕನಿಷ್ಠ 10 ವರ್ಷಗಳ ಸೇವೆಯ ನಂತರ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂ. ನೀಡಲಾಗುತ್ತದೆ.

ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇಕಡಾ 10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇಕಡಾ 14 ರಷ್ಟು ಕೊಡುಗೆ ನೀಡುತ್ತದೆ. ಇದನ್ನು ಯುಪಿಎಸ್‌ನೊಂದಿಗೆ ಶೇಕಡಾ 18 ಕ್ಕೆ ಹೆಚ್ಚಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *