ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್ ನೋಡಲು ಬರುವವರ ಕನಸಿಗೆ ಕೊಳ್ಳಿ ಇಟ್ಟಂತೆ ಆಗಿದೆ.
ದಿಢೀರನೇ ಬಂದ ಮಳೆ ಸಾರ್ವಜನಿಕರಿಗೆ ಗಲಿಬಿಲಿ ಮಾಡಿದೆ. ರಸ್ತೆ ಬದಿ ವ್ಯಾಪಾರಿಗಳಿಗೆ ಹಿಂಸೆಯಾಗಿದೆ. ವಾಹನ ಸವಾರರು ಪರದಾಡಿದ್ದಾರೆ. ಇದರ ಜೊತೆಗೆ ಇಂದು ಆರ್ಸಿಬಿ ಅಭಿಮಾನಿಗಳಿಗೆ ಹೊಟ್ಟೆ ಉರಿಸಿದೆ. ಇಂದು ಮಾಡು ಇಲ್ಲವೆ ಪಂದ್ಯ. ಆರ್ಸಿಬಿ ಪ್ಲೇ ಆಫ್ ಗೆ ಹೋಗಬೇಕೆಂದರೆ ಇಂದಿನ ಮ್ಯಾಚ್ ಗೆಲ್ಲಲೇಬೇಕಾಗಿದೆ. ಆದರೆ ಮಳೆರಾಯ ಮ್ಯಾಚ್ ಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಇಂದು ಸಂಜೆ 7.30ಕ್ಕೆ ಮ್ಯಾಚ್ ನಡೆಯಲಿದೆ. ಸಿಎಸ್ಕೆ ಮತ್ತು ಆರ್ಸಿಬಿ ನಡುವೆ ಬಿಗ್ ಫೈಟ್ ನಡೆಯಲಿದೆ. ಈ ಮ್ಯಾಚ್ ನಲ್ಲಿ ಆರ್ಸಿಬಿಯೇ ಗೆಲ್ಲಬೇಕು ಎಂದು ಅಭಿಮಾನಿಗಳು ಪ್ರಾರ್ಥನೆ ಕೂಡ ಮಾಡಿದ್ದಾರೆ. ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಇವತ್ತು ಆರ್ಸಿಬಿ ಗೆಲ್ಲಲೇಬೇಕು ದೇವರೆ ಎಂದು ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸಿಎಸ್‌ಕೆ ಈ ಪಂದ್ಯದಲ್ಲಿ ಯಾವುದೇ ಅಂತರದಿಂದ ಗೆಲುವು ಸಾಧಿಸಿದರೆ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಆದರೆ ಆರ್‌ಸಿಬಿ 18 ರನ್‌ಗಳಿಗಿಂತ ಹೆಚ್ಚು ಅಂತರದಲ್ಲಿ ಅಥವಾ 18.1 ಓವರ್‌ಗಳಿಗಿಂತ ಒಳಗೆ ಗೆಲ್ಲಬೇಕು.
ಈಗಾಗಲೇ ಮಳೆಯಾಗುತ್ತಿದ್ದು, ಅಭಿಮಾನಿಗಳಿಗೆ ಮ್ಯಾಚ್ ನೋಡುವುದಕ್ಕೂ ಅಡ್ಡಿಯಾಗಿದೆ. ಒಂದು ವೇಳೆ ಮಳೆ ಜೋರಾದರೆ ಮ್ಯಾಚ್ ರದ್ದಾಗುವ ಸಾಧ್ಯತೆಯೂ ಇದೆ.