ಬೆಂಗಳೂರು: ಮುಂಗಾರು ಮಳೆ ಹೇಳುವುದಕ್ಕೆ ಹೆಸರಿಲ್ಲದಂತೆ ಕಾಣೆಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಳೆ ಬಂದಂತೆ ಆಯಿತು, ಆದರೆ ಮತ್ತೆ ನಾಪತ್ತೆಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕೂಡ ಹಲವು ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಈ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಮಳೆ ದರ್ಶನ ಕೊಟ್ಟು ಕೊಟ್ಟು ಹೋಗುತ್ತಿದೆ. ಹವಮಾನ ಇಲಾಖೆಯ ಮಾಹಿತಿ ಪ್ರಕಾರ, ಸೆಪ್ಟೆಂಬರ್ 23ರ ತನಕ ಕೆಲವು ಜಿಲ್ಲೆಗಳಲ್ಲಿ ಮಳೆ ಬರಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಪ್ರಮಾಣ ಜೋರಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್23 ರ ತನಕ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಿನ್ನೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ.
ಕರಾವಳಿ ಭಾಗದಲ್ಲಿ ಮುಂದಿನ 24 ಗಂಟೆಯಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಬೆಂಗಳೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಹೀಗಾಗಿ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯೂ ಇದೆ.