ಚಿತ್ರದುರ್ಗ: ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಡು ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಭರಮಸಾಗರ ಹೋಬಳಿಯ ಬಸ್ತಿಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ. ಆಲಿಕಲ್ಲು ಸಹಿತ ಮಳೆಯಾಗಿದ್ದು, ಇದರಿಂದಾಗಿ 20 ಕ್ಕೂಹೆಚ್ಚು ರೈತರು ಕಣ್ಣೀರು ಹಾಕಿದ್ದಾರೆ. ರೈತರ ಬೆಳೆ ನೆಲಕಚ್ಚಿದೆ.
ರಸ್ತೆಗಳಲ್ಲಿ ನೀರು ನಿಂತಿದೆ. ಸ್ಟೇಡಿಯಂ ರಸ್ತೆಯಲ್ಲಿ ಮರಗಳು ಉರುಳಿವೆ. ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಕೋಟೆನಾಡು ಜಿಲ್ಲೆಯಲ್ಲಿ ಮಳೆಯಿಂದಾಗಿ ಸಮಸ್ಯೆ ಶುರುವಾಗಿದೆ. ಇನ್ನು ಚಿತ್ರದುರ್ಗ ಮಾತ್ರವಲ್ಲ ಚಿಕ್ಕಮಗಳೂರು, ಬಾಗಲಕೋಟೆಯಲ್ಲೂ ಮಳೆ ಅವಾಂತರ ಸೃಷ್ಟಿಸಿದೆ.
ಚಿಕ್ಕಮಗಳೂರಿನಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. 47 ಗ್ರಾಮ ಪಂಚಾಯತಿ ವ್ಯಾಪ್ತಿಯ 77 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯೂ ಆರಂಭದ ಮಳೆಗೇನೆ ತತ್ತರಿಸಿ ಹೋಗಿದೆ. ಯಾಕಂದ್ರೆ ಈಗಾಗಲೇ ಕೊಡಗಿನಲ್ಲಿ ಮಳೆಯಿಂದಾಗಿಯೇ ಪ್ರವಾಹ ಉಂಟಾಗಿತ್ತು. ಎಷ್ಟೋ ಜನ ಮನೆ ಮಠಗಳನ್ನು ಕಳೆದುಕೊಂಡು, ಈಗ ಸರ್ಕಾರ ನೀಡಿದ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಹೀಗಾಗಿ ಆರಂಭದ ಮಳೆಯೇ ಎಲ್ಲೆಡೆ ಅವಾಂತರ ಸೃಷ್ಟಿ ಮಾಡಿದ್ದು, ಆತಂಕಕ್ಕೆ ಕಾರಣವಾಗಿದೆ.