ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್.02 : ವೈಯುಕ್ತಿಕ ದೇಹದ ಸ್ವಚ್ಛತೆಯ ಜೊತೆ ನಮ್ಮ ಗ್ರಾಮದ ಶಾಲೆ ಮನೆ ದೇವಸ್ಥಾನ ಹಾಗು ಬೀದಿಗಳ ಸ್ವಚ್ಚತೆಯು ನಮ್ಮ ಆದ್ಯ ಕರ್ತವ್ಯವಾಗಬೇಕು. ಸ್ವಚ್ಛತೆಯೇ ನಮ್ಮ ಕಣ್ಣಿಗೆ ಕಾಣುವ ದೇವರು ಎಂದು ಸಹಶಿಕ್ಷಕಕ ಟಿ.ಪಿ.ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆ ವತಿಯಿಂದ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಹಾಗು ಸ್ವಚ್ಛತೆಗಾಗಿ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವಚ್ಚತೆಯ ಮಹತ್ವ ಅರಿಯಬೇಕು. ಸ್ವಚ್ಚತೆಯಿರುವಲ್ಲಿ ಆರೋಗ್ಯ; ಆರೋಗ್ಯವಿರುವಲ್ಲಿ ಸಮೃದ್ಧಿ ಆದ್ದರಿಂದ ಸ್ವಚ್ಚತೆಗಾಗಿ ನಾವು ಸೇವೆ ಮಾಡಬೇಕು. ಚಿಕ್ಕ ವಯಸ್ಸಿನಿಂದಲೇ ವಿದ್ಯಾಭ್ಯಾಸದ ಜೊತೆಗೆ ಯೋಗ ಸರಳ ವ್ಯಾಯಾಮ ಹಾಗು ಮನೆ ಕೆಲಸಗಳ ಮಾಡುವ ಜೊತೆಗೆ ನಮ್ಮ ಪರಿಸರದ ಸ್ವಚ್ಛತೆಯನ್ನು ನಾವೇ ಮಾಡುವ ಗುಣ ಬೆಳೆಸಿಕೊಳ್ಳಬೇಕು.
ಗಾಂಧೀಜಿಯವರು ದೇಶದ ಮಹಾ ನಾಯಕರಾಗಿದ್ದರು ಸಹ ಅವರ ಬಟ್ಟೆ ಅವರೆ ಶುಚಿಗೊಳಿಸಿಕೊಂಡು ಅವರ ಆಶ್ರಮ ಹಾಗು ಶೌಚಾಲಯಗಳ ಸ್ವಚ್ಚತೆಯನ್ನು ಸ್ವತಃ ತಾವೇ ಮಾಡುತ್ತಿದ್ದರು ಮತ್ತು ಅವರು ಸಂಚರಿಸುವ ಎಲ್ಲ ಗ್ರಾಮ ಪಟ್ಟಣಗಳ ಬೀದಿಗಳ ಸ್ವಚ್ಚತೆಗೆ ಮುಂದಾಗುತ್ತಿದ್ದರು. ಅವರಿಂದ ಸ್ಪೂರ್ತಿ ಪಡೆದ ಲಕ್ಷಾಂತರ ಜನರು ಸೇವೆಗಾಗಿ ಜೀವನ ಮುಡಿಪಾಗಿಟ್ಟು ಭಾರತ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಹಿರಿಯರ ಜೀವನ ನಮಗೆ ಆದರ್ಶವಾಗಬೇಕು ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಡಿ.ಸಿದ್ಧಪ್ಪ, ಸಹಶಿಕ್ಷಕಿ ರೇಷ್ಮಾ, ಅಕ್ಷರ ದಾಸೋಹ ಕಾರ್ಯಕರ್ತರಾದ ತಿಮ್ಮಮ್ಮ ಶಾರದಮ್ಮ ಗ್ರಾಮಸ್ಥರಾದ ಶ್ರೀನಿವಾಸ, ಸಂದೀಪ, ಸುರೇಶ ಮತ್ತಿತರರು ಉಪಸ್ಥಿತರಿದ್ದು ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಿ ಶಾಲಾವರಣದ ಸ್ವಚ್ಛತೆಯಲ್ಲಿ ಭಾಗವಹಿಸಿದರು.