ಆರೋಗ್ಯ ಸೇವೆ ಕಾನೂನಾಗಬೇಕು : ಗೋಪಾಲುದಾಬಡೆ

2 Min Read

ಸುದ್ದಿಒನ್, ಚಿತ್ರದುರ್ಗ. ಜ.14: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ವಿತರಣೆಯಾಗಬೇಕು, ಸರ್ಕಾರಿ ಆಸ್ಪತ್ರೆಯ ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಗಳಿಗೆ ಹೊರಗಡೆ ಔಷಧಿ ಖರೀದಿಸಲು ಚೀಟಿ ಬರೆಯಬಾರದು ಮತ್ತು ಪ್ರತಿಯೊಬ್ಬರಿಗೂ ಕಾನೂನಾತ್ಮಕವಾಗಿ ಆರೋಗ್ಯ ಸೇವೆ ಲಭ್ಯವಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯಾದ್ಯಂತ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಾಥಾದ ರಾಜ್ಯ ಸಂಚಾಲಕ ಡಾ.ಗೋಪಾಲುದಾಬಡೆ ಹೇಳಿದರು.

ನಗರ ಹೊರವಲಯದ ಧಮ್ಮ ಕ್ಯಾಂಪಸ್‍ನಲ್ಲಿ ವಿವಿಧ ಎನ್‍ಜಿಓ ಮುಖ್ಯಸ್ಥರ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು. ಆರೋಗ್ಯ ಹಕ್ಕಿಗಾಗಿ ಜಾಥಾವನ್ನು ಹಮ್ಮಿಕೊಳ್ಳಲು ಈಗಾಗಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಏಳರಂದು ಆರೋಗ್ಯ ಹಕ್ಕಿಗಾಗಿ ಜಾಥಾವು ಚಿತ್ರದುರ್ಗವನ್ನು ತಲುಪಲಿದೆ ಎಂದು ಗೋಪಾಲುದಾಬಡೆ ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ನೀಡಲು ಕೆಎಸ್‍ಎಂಎಸ್‍ಸಿಎಲ್ ಮೂಲಕವಾಗಿ ವಿತರಣಾ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಆದಾಗ್ಯೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವು ವೈದ್ಯರು ಹೊರಗಡೆ ಖರೀದಿಸುವಂತೆ ರೋಗಿಗಳಿಗೆ ಚೀಟಿ ಬರೆದು ಕೊಡುತ್ತಾರೆ. ಆದ್ದರಿಂದ ಅನಾರೋಗ್ಯ ವ್ಯವಸ್ಥೆಯು ಬಡತನಕ್ಕೆ ಮೂಲ ಕಾರಣವಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು, ಅವುಗಳನ್ನು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ವಹಿಸಿಕೊಡುವಂತಹ ಹುನ್ನಾರ ನಡೆದಿದ್ದು, ಇದನ್ನು ವಿರೋಧಿಸಿ ಆರೋಗ್ಯ ಜಾಗೃತಿ ಜಾಥಾದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಔಷಧಿ ಮಾಫಿಯಾ ವಿರುದ್ಧ ಜನರನ್ನು ಸಜ್ಜುಗೊಳಿಸಲು ಆರೋಗ್ಯ ಹಕ್ಕಿಗಾಗಿ ಜಾಗೃತಿ ಜಾಥಾ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಗೋಪಾಲುದಾಬಡೆ ಹೇಳಿದರು.

ಸರ್ವೋದಯ ಮಂಡಳದ ಅಧ್ಯಕ್ಷ ಡಾ.ಹೆಚ್.ಎಸ್.ಕೆ.ಸ್ವಾಮಿ ಅವರು ಮಾತನಾಡಿ ಮಹಾತ್ಮಗಾಂಧಿಜೀಯವರು ಚರಕವನ್ನು ಉಪಯೋಗಿಸುವ ಮೂಲಕ ಖಾದಿಯನ್ನು ಉತ್ಪಾದಿಸಿ, ಬಡತನ ನಿರ್ಮೂಲನೆಗಾಗಿ ಸಂಘಟನಾತ್ಮಕ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಚರಕ ಬಳಸುವುದನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಧಮ್ಮ ಕೇಂದ್ರದ ನಿರ್ದೇಶಕರಾದ ಆರ್.ವಿಶ್ವಸಾಗರ್ ಅವರು ಮಾತನಾಡಿ, ಬಡತನಕ್ಕೆ ಅನಾರೋಗ್ಯವೂ ಕೂಡ ಬಹಳ ಕಾರಣವಾಗುತ್ತಿದ್ದು, ವ್ಯಕ್ತಿ ಆರೋಗ್ಯವಾಗಿರಲು ಖಾಸಗಿ ಸಂಸ್ಥೆಗಳಿಗಿಂತಲೂ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಅನಾರೋಗ್ಯ ಕಾಡಲು ಶುರುವಾದರೆ ಆ ಇಡೀ ಕುಟುಂಬವೇ ಸಾಲಗಾರನಾಗಬೇಕಾಗುತ್ತದೆ. ಹಾಗೆಯೇ ಬಡತನಕ್ಕೂ ಮೂಲ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರ ಸಹಕಾರದೊಂದಿಗೆ ಆರೋಗ್ಯ ಹಕ್ಕಿಗಾಗಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತಹ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.

ಆರೋಗ್ಯ ಹಕ್ಕಿಗಾಗಿ ಜಾಥಾ ಕಾರ್ಯಕ್ರಮದ ಪೂರ್ವಾಭಾವಿ ಸಭೆಯಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ವಿ.ಕೆ.ಶಂಕರಪ್ಪ, ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಸುಶೀಲಮ್ಮ, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ, ದೌರ್ಜನ್ಯ ತಡೆ ಕಾಯ್ದೆ ಸಮಿತಿಯ ನಾಮನಿರ್ದೇಶಕರಾದ ರಾಮಣ್ಣ ಕೂನಿಕೆರೆ.ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್,ಜುಬೇರ್ ಅನ್ಸಾರಿ, ರೇಷ್ಮಾ, ಶ್ರೀಮತಿ ನಾಗರತ್ನ, ಶ್ರೀಮತಿ ಬಿಬಿಜಾನ್, ಅರಣ್ಯಸಾಗರ್, ನಾಗಪ್ಪ, ಅನಾಥಾಶ್ರಮದ ತಿಪ್ಪೇಸ್ವಾಮಿ, ಶಾಹಿ ಸಂಸ್ಥೆಯ ಶಫಿವುಲ್ಲಾ, ಆಶಾ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮೀಬಾಯಿ, ಮುಂತಾದವರು ಪೂರ್ವಾಭಾವಿ ಸಭೆಯಲ್ಲಿ ಹಾಜರಿದ್ದರು.

Share This Article