ಸೂರ್ಯನ ಕಿರಣಗಳಿಂದ ಆಗುವ ಆರೋಗ್ಯ ಪ್ರಯೋಜನಗಳು : ಡಾ.ಕೆ.ವಿ. ಸಂತೋಷ್ ಅವರ ವಿಶೇಷ ಲೇಖನ

4 Min Read

 

ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಜಗತ್ತನ್ನೇ ಬೆಳಗುವ ಸೂರ್ಯ ರಶ್ಮಿಯು ಪ್ರತಿ ಜೀವ ಸಂಕುಲಕ್ಕೆ ಒಂದು ಪ್ರಮುಖ ಆಧಾರ. ಆ ಕಾರಣಕ್ಕೆ ಸೂರ್ಯನನ್ನು ದೇವರ ರೂಪದಲ್ಲಿ ಅನಾದಿಕಾಲದಿಂದಲೂ ಪೂಜಿಸಲಾಗುತ್ತಿದೆ. ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣ ಮೊದಲು ನಾವು ಸೂರ್ಯನ ಕಡೆಗೆ ಮುಖ ಮಾಡಿ ಸೂರ್ಯನನ್ನು ಧ್ಯಾನಿಸಲು ಹೇಳಲಾಗುತ್ತದೆ. ಸೂರ್ಯನಿಗೆ ಆರ್ಗ್ಯ ಕೊಡಲು ಹೇಳಲಾಗುತ್ತದೆ. ಸ್ನಾನದ ನಂತರ ಸೂರ್ಯನಿಗೆ ಕೈಮುಗಿಯಲು ಕೂಡ ಹೇಳಲಾಗುತ್ತದೆ.

ಇವೆಲ್ಲದರ ಹಿಂದೆ ಧಾರ್ಮಿಕ ಆಧ್ಯಾತ್ಮಿಕ ಕಾರಣ ಒಂದಾದರೆ,ಇದರ ಹಿಂದೆ ವೈಜ್ಞಾನಿಕ ಸತ್ಯವು ಅಡಗಿದೆ. ಪ್ರತಿ ಜೀವಸಂಕುಲದಂತೆ ಮಾನವನಿಗೂ ಹುಟ್ಟಿದಾಗಿನಿಂದ ಸಾಯುವ ತನಕ ಸೂರ್ಯ ಕಿರಣಗಳು ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವಪೂರ್ಣವಾದುದು ಎಂದು ಹಿಂದಿನವರಿಗೆ ಇದು ಅರಿವಾಗಿತ್ತು.  ಆ ಕಾರಣಕ್ಕೆ ಅವರು ಪ್ರತಿದಿನವೂ ಮಾನವನು ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿತ್ತು. ಜೊತೆಗೆ ತುಂಬಾ ಹೊತ್ತಿನ ತನಕ ಬೆಳಗಿನ ಸೂರ್ಯನ ಕಿರಣಗಳೊಂದಿಗೆ ಅವರು ಕೆಲಸ ನಿರ್ವಹಿಸುತ್ತಿದ್ದರು. ಇಂದಿಗೂ ಕೂಡ ಪ್ರತಿ ವೈದ್ಯರು ಆರೋಗ್ಯ ಪಡೆಯಲು ರೋಗಿಗಳಿಗೆ ಸೂರ್ಯನ ಕಿರಣಗಳಿಗೆ ಮೈ ಒಡ್ಡುವಂತೆ ಹೇಳುತ್ತಾರೆ.
ಜೀವನಕ್ಕೆ ಜೀವಕ್ಕೆ ಚೇತೋಹಾರಿಯಾದ ಸೂರ್ಯನ ಕಿರಣಗಳ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.
ಸೂರ್ಯನ ಕಿರಣಗಳು ಕೇವಲ ನಮಗೆ ವಿಟಮಿನ್ ಡಿ ಕೊಡುವುದು ಮಾತ್ರವಲ್ಲದೇ ಬಹಳಷ್ಟು ಇನ್ನಿತರ ಆರೋಗ್ಯ ಪೂರ್ಣ ಅಂಶಗಳಿಗೆ ಕೂಡ ಅನುಕೂಲ ಕಲ್ಪಿಸುತ್ತದೆ. ಪ್ರತಿಯೊಬ್ಬರೂ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ.

ಸೂರ್ಯನ ಕಿರಣಗಳಿಂದ ಆಗುವ ಪ್ರಯೋಜನಗಳು :     ಸೂರ್ಯನ ಕಿರಣಗಳು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತವೆ,ಅಂಗಾಂಗಗಳ ಪರಿಚಲನೆಯನ್ನು ರಕ್ತ ಸಂಚಾರವನ್ನು ಹೆಚ್ಚಿಸಿ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

* ದೈಹಿಕ ಹಾರ್ಮೋನು ರಸದೂತಗಳ ಸಮತೋಲನ ಕಾಯ್ದುಕೊಳ್ಳುವಂತೆ ಪ್ರೇರೇಪಿಸುತ್ತದೆ.
* ದೈಹಿಕ ಅನಾರೋಗ್ಯವನ್ನು ತಡೆಗಟ್ಟುತ್ತದೆ.ಜೊತೆಗೆ ದೈಹಿಕ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ, ಪ್ರಬಲಗೊಳಿಸುತ್ತದೆ.
* ವಿಟಮಿನ್ ಡಿ ಮೂಲಕ ಮೂಳೆಗಳ ಸದೃಢತೆಯನ್ನು ಬಲಪಡಿಸುತ್ತದೆ.
* ದೈಹಿಕ ಪೋಷಕಾಂಶಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೇಹಕ್ಕೆ ಸಿಗುವಂತೆ ಮಾಡುತ್ತದೆ.
* ನಿದ್ರೆಯನ್ನು ಸೂಕ್ತ ರೀತಿಯಲ್ಲಿ ಉತ್ತೇಜಿಸುತ್ತದೆ.
* ಗಾಯಗೊಂಡ, ವಾಸಿಯಾಗದ ದೀರ್ಘಕಾಲಿನ ಗಾಯಗಳು ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಂಡಾಗ ಅಥವಾ ಶಾಖಕ್ಕೆ ಗುಣಮುಖವಾಗುತ್ತದೆ.
* ಕ್ಯಾನ್ಸರ್ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಕ್ಯಾನ್ಸರ್ ಅಂಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
* ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ ಖಿನ್ನತೆ, ಆಲಸ್ಯತನ, ಬೇಜಾರು, ದುಃಖ ಮುಂತಾದ ಮಾನವನ ಮಾನಸಿಕ ಏರುಪೇರುಗಳನ್ನು ಸಮಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ.
* ಮಾನವನ ಮಾನಸಿಕ ಸ್ಥಿತಿಯನ್ನು ಒಂದೇ ರೀತಿ ಇರುವಂತೆ ಕಾಯ್ದುಕೊಳ್ಳುತ್ತದೆ.
* ಮಾನವನ ಆರೋಗ್ಯದ ದೈಹಿಕ ಚಕ್ರ ಹಾಗೂ ಆಂತರಿಕ ಸ್ಥಿತಿಯನ್ನು ಸಮ ಸ್ಥಿತಿಯಲ್ಲಿ ಇರುವಂತೆ ಕಾಯ್ದುಕೊಳ್ಳುತ್ತದೆ. (ಅಂದರೆ ನಿದ್ದೆಯ ಸಮಯದಲ್ಲಿ ನಿದ್ದೆ ಊಟದ ಸಮಯದಲ್ಲಿ ಸರಿಯಾಗಿ ಹಸಿವು ಈ ರೀತಿ…).
* ಹೃದ್ರೋಗ ತಡೆಗಟ್ಟುತ್ತದೆ, ಹೃದಯ ಆರೋಗ್ಯವನ್ನು ಬಲಗೊಳಿಸುತ್ತದೆ. ರಕ್ತದ ಪರಿಚಲನೆಯನ್ನು ಉತ್ತೇಜಿಸುತ್ತದೆ.
* ಹಸಿವಿನ ಚಕ್ರ,ಬಾಯಾರಿಕೆಯ ಚಕ್ರ ಹಾಗೂ ದೈಹಿಕ ಬೇಕು ಬೇಡಗಳ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ.

ಬಿಸಿಲಿನ ಶಾಖಕ್ಕೆ ಅಥವಾ ನಾವು ಬಿಸಿಲಿಗೆ ಹೋದರೆ ಕಪ್ಪಾಗುತ್ತೇವೆ ಎಂಬ ಒಂದು ಮೂಢನಂಬಿಕೆ ಬಹಳಷ್ಟು ಜನರಲ್ಲಿ ಇರುತ್ತದೆ ಆದರೆ ಇದು ಸತ್ಯವಲ್ಲ. ಹತ್ತರಿಂದ 3 ಗಂಟೆಯ ಬಿಸಿಲಿಗೆ ಹೋದರೆ ಮಾತ್ರ ಈ ರೀತಿ ಆಗಬಹುದೇ ಹೊರತು ಬೆಳಗಿನ ಹತ್ತರ ಒಳಗಿನ ಬಿಸಿಲು ಎಂದಿಗೂ ನಮ್ಮ ಚರ್ಮವನ್ನು ಕಪ್ಪಾಗುವಂತೆ ಮಾಡುವುದಿಲ್ಲ.

ಬಿಸಿಲಿಗೆ ಹೋಗದೆ ನಾವು ಸದಾ ಕಾಲ ಮನೆಯೊಳಗೆ ಇದ್ದರೆ ಏನಾಗಬಹುದು?
* ಇಂತಹವರಿಗೆ ವಿಟಮಿನ್ ಡಿ ಸರಿಯಾದ ರೀತಿಯಲ್ಲಿ ದೇಹಕ್ಕೆ ದೊರಕದೆ ಮೂಳೆಗಳು ದುರ್ಬಲ ಸ್ಥಿತಿಯಲ್ಲಿ ಇರುತ್ತವೆ.
* ರಕ್ತ ಪರಿಚಲನೆ ಸರಿಯಾಗಿ ಆಗದೆ ಸದಾ ಕಾಲ ಮಂಕು ಬೇಜಾರು, ಆಲಸಿತನ, ಕೆಲಸದಲ್ಲಿ ನಿರಾಸಕ್ತಿ ಇರುತ್ತದೆ.
* ಚರ್ಮದ ಬಣ್ಣ ಸಾಮಾನ್ಯ ರೀತಿಯಲ್ಲಿ ಇರದೇ ಬಿಳಿಚಿಕೊಂಡಿರುತ್ತದೆ.
* ಇಂತಹವರಿಗೆ ಸ್ವಲ್ಪ ಬಿಸಿಲಿಗೆ ಹೋದರೂ ನಂತರದ ದಿನಗಳು ಚರ್ಮ ಉರಿಯಲು ಶುರುವಾಗುತ್ತದೆ. ಬಿಸಿಲಿನ ಸಣ್ಣ ಶಾಖವನ್ನು ತಡೆದುಕೊಳ್ಳಲು ದೇಹ ಅಸಮರ್ಥವಾಗುತ್ತದೆ.
* ದೇಹದ ಅನಾರೋಗ್ಯ ಸ್ಥಿತಿ ಮುಂದುವರೆಯುತ್ತದೆ ಅಥವಾ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ.
* ಸದಾ ಕಾಲ ಮನೆಯಲ್ಲಿ ಇರುವಂತಹ ಗೃಹಿಣಿಯರು ಮಕ್ಕಳು ವೃದ್ದರು.. ಇಂತಹ ಸಮಸ್ಯೆಗೆ ಬೇಗ ಈಡಾಗುವರು. ಆ ಕಾರಣಕ್ಕೆ ಕನಿಷ್ಠ ಬೆಳಗ್ಗಿನ ಬಿಸಿಲಿನಲ್ಲಿ ದೇಹವು ಇರುವಂತೆ ನೋಡಿಕೊಳ್ಳಬೇಕು.
*ದೈಹಿಕ ಜೀವನ ಕ್ರಿಯೆ ಹಾಗೂ ರಕ್ತ ಪರಿಚಲನೆಯು ಸರಿಯಾದ ವಿಧಾನದಲ್ಲಿ ನಡೆಯುವುದಿಲ್ಲ.
* ಮೇಲೆ ತಿಳಿಸಿದ ಆರೋಗ್ಯದ ಉಪಯೋಗಗಳು ಎಂದಿಗೂ ಇಂತಹ ವ್ಯಕ್ತಿಗಳಿಗೆ ದೊರಕದೇ ಹೋಗಬಹುದು.

ಕೊನೆಯ ಮಾತು:
ಸಾಧ್ಯವಾದಷ್ಟು ಬೆಳಗಿನ ಏಳರಿಂದ ಹತ್ತರ ಸಮಯದಲ್ಲಿ ಬಿಸಿಲಿನ ಶಾಖಕ್ಕೆ ಮೈ ಒಡ್ಡಿಕೊಳ್ಳಬೇಕು ಅಥವಾ ಬಿಸಿಲಿನಲ್ಲಿ ನೀವು ಇರುವಂತೆ ನೋಡಿಕೊಳ್ಳಬೇಕು. ಮಧ್ಯಾಹ್ನ 11 ರಿಂದ 3 ಗಂಟೆಯ ತೀವ್ರ ಸೂರ್ಯನ ಶಾಖದಲ್ಲಿ ಎಂದಿಗೂ ಮೈ ಒಡ್ಡಬಾರದು, ಹಾಗೂ ಬಿಸಿಲಿನ ತೀವ್ರತೆ ಹೆಚ್ಚಿದಾಗ ಬಿಸಿಲಿಗೆ ಹೋಗಬಾರದು. ಬಿಸಿಲು ಇಲ್ಲದ ದಿನಗಳಲ್ಲಿ ಅಂದರೆ ಮಳೆಗಾಲದಲ್ಲಿ ಹಾಗೂ ತೀವ್ರವಾಗಿ ಮೋಡ ಮುಸುಕಿದ ದಿನಗಳಲ್ಲಿ ಸೂರ್ಯನ ಕಿರಣಗಳು ಇರದಿದ್ದ ಸಮಯದಲ್ಲಿ ಪ್ರತಿ ವ್ಯಕ್ತಿಗೂ ಆಲಸ್ಯತನ,ಕೆಲಸದಲ್ಲಿ ಬೇಜಾರು ಇದ್ದೇ ಇರುತ್ತದೆ. ಇದು ಸೂರ್ಯನ ಬೆಳಕಿನ ಮಹತ್ವವನ್ನು ತೋರಿಸುತ್ತದೆ. ಆ ಕಾರಣಕ್ಕೆ ಬಿಸಿಲು ಇರಲಿ ಇಲ್ಲದಿರಲಿ ಸಾಧ್ಯವಾದಷ್ಟು ಬೆಳಗಿನ ಬಿಸಿಲಿನ ಸಮಯದಲ್ಲಿ ಪ್ರತಿ ವ್ಯಕ್ತಿಯು ಬಿಸಿಲಿನಲ್ಲಿ ದೇಹವನ್ನು ಇರುವಂತೆ ನೋಡಿಕೊಳ್ಳಬೇಕು ಅಥವಾ ಮನೆಯೊಳಗೆ ಬಿಸಿಲು ಬರುವಂತೆ ಮಾಡಿಕೊಂಡಿರಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬಿಸಿಲಿನಲ್ಲಿ ಅದರಲ್ಲೂ ಬೇಸಿಗೆ ಸಮಯದಲ್ಲಿ ಹೆಚ್ಚು ಒಡ್ಡಿಕೊಳ್ಳಬಾರದು.

Share This Article
Enable Notifications OK No thanks