ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತಮಾಡಿದ ಬಿ.ಸಿ.ಪಾಟೀಲ್, ನನ್ನ ದೊಡ್ಡ ಮಗಳು ಸೌಮ್ಯಾಳೊಂದಿಗೆ ಮದುವೆಯಾಗಿತ್ತು. ಮದುವೆಯಾದ ಬಳಿಕ ನನ್ನ ಜೊತೆಗೆ ಇದ್ದು, ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ. ಇಂದು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆಂದು ಹೇಳಿದ. ಹೋಗಿ ಬಾ ಎಂದು ನಾನು ಕೂಡ ಹೇಳಿದ. ಮಧ್ಯಾಹ್ನ 1.30ರ ಸುಮಾರಿಗೆ ತಾತನ ಸಹೋದರನ ಕಡೆಯಿಂದ ಫೋನ್ ಬಂತು. ಪ್ರತಾಪ್ ಎಲ್ಲಿದ್ದಾನೆ ಗೊತ್ತಾ ಎಂಬುದಾಗಿ ಕೇಳಿದರು. ಆಗಿನ್ನು ಮಾತ್ರೆ ತೆಗೆದುಕೊಂಡಿರುವ ವಿಚಾರ ತಿಳಿಯಿತು. ಫೋನ್ ಸ್ವಿಚ್ಡ್ ಆಫ್ ಆಗಿದೆ ಎಂದರು.
ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿದೆ. ನಂಬರ್ ಕೇಳಿದರು ನಂಬರ್ ಕೊಟ್ಟೆ. ಬಳಿಕ ಅಳಿಯನಿಗೂ ಕರೆ ಮಾಡಿದೆ. ಕಾಲ್ ರಿಸೀವ್ ಮಾಡಿದ. ಆದರೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗಲೇ ವಾಂತಿ ಮಾಡುತ್ತಿದ್ದ. ನಾನು ಕೇಳಿದೆ ಎಲ್ಲಿದ್ದೀಯಾ ಎಂದಾಗ ರಾಣೇಬೆನ್ನೂರಿನ ರೋಡ್ ಎಂದ. ನಾನು ಮತ್ತೆ ಕೇಳಿದೆ ಹೊನ್ನಾಳಿಯ ರಾಣೇಬೆನ್ನೂರು ಎಂದ. ತಕ್ಷಣ ಎಲ್ಲರಿಗೂ ವಿಷಯ ತಿಳಿಸಿದೆ. ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ಪ್ರತಾಪ್ ಸಿಕ್ಕಿದ ಎಂಬ ವಿಚಾರ ತಿಳೀತು.
ಪ್ರತಾಪ್ ತಮ್ಮ ಪ್ರಭು ಕೂಡ ಹುಡುಕಾಟ ನಡೆಸುತ್ತಿದ್ದರು. ಪ್ರತಾಪ್ ಸಿಕ್ಕಿದ ಕೂಡಲೇ ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದರು. ಹೊನ್ನಾಳಿ ವೈದ್ಯರ ಬಳಿ ಕೇಳಿದೆ. ಏನಾಗಿದೆ ಎಂದಾಗ ಮೆಕ್ಕೆಜೋಳಕ್ಕೆ ಹಾಕುವ ಔಷಧಿ ಕುಡಿದಿದ್ದಾರೆಂದರು. ಪ್ರತಾಪ್ ತಮ್ಮ ಪ್ರಭು, ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆಂದರು. ಸರಿ ನಾನು ಬರುತ್ತೀನಿ ಎಂದೆ. ಆದರೆ 10 ಕಿ.ಮೀ ಕ್ರಮಿಸುವಷ್ಟರಲ್ಲಿ ಪ್ರಭು ಕರೆ ಮಾಡಿ, ಪ್ರತಾಪ್ ನಿಧನರಾದರು ಎಂದು ತಿಳಿಸಿದರು. ಮಗಳಿಗೆ ಮಕ್ಕಳಾಗಿರಲಿಲ್ಲ. ಅದರ ಕೊರಗು ಪ್ರತಾಪ್ ನನ್ನು ಕಾಡುತ್ತಿತ್ತು ಎಂದಿದ್ದಾರೆ.