ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹೆಸರು ಬರೆದಿಟ್ಟು ತಹಶಿಲ್ದಾರರ ಕಚೇರಿಯಲ್ಲಿ ಎಸ್ಡಿಎ ರುದ್ರಣ್ಣ ಯಡವಣ್ಣ ನೇಣಿಗೆ ಶರಣಾಗಿದ್ದಾರೆ. ಈ ಕೇಸಿನ ಬಗ್ಗೆ ಇದೀಗ ಅವರ ತಾಯಿ ನೊಂದು ಮಾತಾಡಿದ್ದಾರೆ. ನಿನ್ನೆ ರಾತ್ರಿ ನಾವಿಬ್ಬರು ಕೂತು ಊಟ ಮಾಡಿದೆವು. ಆದರೆ ಫೋಮ್ ಬಂದ ಕೂಡಲೇ ಅರ್ಧಕ್ಕೆ ಊಟ ಬಿಟ್ಟು ಹೋದ ಎಂದು ದುಃಖ ತೋಡಿಕೊಂಡಿದ್ದಾರೆ.
ಊಟ ಮಾಡುವಾಗ ಯಾರದ್ದೋ ಫೋನ್ ಬಂತು. ಫೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ. ಕೇಳಿದರೆ ಏನೂ ಹೇಳಲಿಲ್ಲ. ಫೋನ್ ಮಾಡಿದ್ದು ಯಾರೂ ಅಂತಾನೂ ಗೊತ್ತಾಗಲಿಲ್ಲ. ಯಾರಿಂದ ಕಿರುಕುಳ ಇದೆ ಎಂಬುದನ್ನು ಮನೆಯಲ್ಲಿ ಹೇಳ್ತಾ ಇರಲಿಲ್ಲ. ಊಟ ಮಾಡಿ ಹೋದವ ಬೆಳಗ್ಗೆ ಎದ್ದು ನೋಡಿದರೆ ಮನೆಯಲ್ಲಿ ಇರಲಿಲ್ಲ. ವಾಚ್, ಮೊಬೈಲ್, ಹೆಲ್ಮೆಟ್ ಎಲ್ಲಾ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಬೆಳಗ್ಗೆ ಎದ್ದು ವಾಕಿಂಗ್ ಹೋಗಿದ್ದಾನೆಂದು ಸುಮ್ಮನಾದೆವು. ಟ್ರಾನ್ಸ್‌ಫರ್ ಬೇಕು ಅಂತ ಎರಡು ತಿಂಗಳ ಹಿಂದಷ್ಟೇ ಯಾರಿಗೋ ಎರಡು ಲಕ್ಷ ಕೊಟ್ಟಿದ್ದ.
ಇಲ್ಲಿಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ತೀನಿ ಎಂದಿದ್ದ. ಆದರೆ ಯಾರಿಗೆ ಹಣ ಕೊಟ್ಟ ಎಂಬ ಮಾಹಿತಿ ಇಲ್ಲ. ಈಗ ನೋಡಿದರೆ ಹೀಗೆ ನೇಣು ಹಾಕಿಕೊಂಡಿದ್ದಾನೆ ಎಂದು ರುದ್ರಣ್ಣ ಯಡವಣ್ಣ ತಾಯಿ ಮಲ್ಲವ್ವ ಕಣ್ಣೀರು ಹಾಕಿದ್ದಾರೆ. SDA ರುದ್ರಣ್ಣ ಅವರು ನೇಣಿಗೆ ಶರಣಾಗಿದ್ದು ಬೆಳಗಾವಿಯಲ್ಲಿಯೇ ಶಾಕ್ ಆಗಿದೆ. ಸದ್ಯಕ್ಕೆ ಪೊಲೀಸರು ರುದ್ರಣ್ಣ ಯಡವಣ್ಣ ಅವರ ಸಾವಿನ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.