ಧಾರವಾಡ: ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ನಿಷೇಧ ಅನ್ನೋದು ಉಡುಪಿ ಜಾತ್ರೆಯಿಂದ ಶುರುವಾಗಿ ಈಗ ಇನ್ಯಾವುದೋ ಮಟ್ಟಕ್ಕೆ ಹೋಗಿ ನಿಂತಿದೆ. ಮಧ್ಯಪ್ರವೇಶಿಸಿ ಶಾಂತಿ ಮಾಡಬೇಕಾದ ಸರ್ಕಾರ ಮೌನವಹಿಸಿದೆ. ಇತ್ತ ಶ್ರೀರಾಮಸೇನೆ ಕಾರ್ಯಕರ್ತರು ಬಹಿಷ್ಕಾರದ ನೆಪದಲ್ಲಿ ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇಂದು ಕೂಡ ಅಂತದ್ದೇ ಘಟನೆ ಧಾರಾವಾಡದಲ್ಲಿ ನಡೆದಿದೆ.
ನುಗ್ಗಿಕೇರಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮುಸ್ಲಿಂ ಸಮುದಾಯದವರು ಅಂಗಡಿ ಹಾಕಿಕೊಂಡಿದ್ದರು. ಅದರಲ್ಲಿ ನಬಿಸಾಬ್ ಎಂಬುವವರು ಕೂಡ ವ್ಯಾಪಾರ ಮಾಡುತ್ತಿದ್ದರು. ಆದರೆ ಇಂದು ಬೆಳಗ್ಗೆ ಶ್ರೀರಾಮಸೇನೆ ಕಾರ್ಯಕರ್ತರು ಏಕಾಏಕಿ ಮುಸ್ಲಿಂ ಸಮುದಾಯದವರ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ನಬಿಸಾಬ್ ಅವರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಬೀದಿಗೆ ಬಿಸಾಕಿ ಅವರ ಕಣ್ಣೀರಿಗೆ ಕಾರಣವಾಗಿದ್ದರು. ಇದೀಗ ಅವರ ಕಣ್ಣೀರನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಒರೆಸಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಕುಮಾರಸ್ವಾಮಿ ಅವರು, ಆಪ್ತರ ಮೂಲಕ ಹಣದ ಸಹಾಯ ಮಾಡಿದ್ದಾರೆ. ಹತ್ತು ಸಾವಿರ ಹಣ ನೀಡಿ, ಘಟನೆಗೆ ಕಾರಣವಾದವರನ್ನು ಬಂಧಿಸಲು ಆಗ್ರಹಿಸಿದ್ದಾರೆ.