ಬೆಂಗಳೂರು: ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೂ ನನ್ನ ಶುಭ ಹಾರೈಕೆಗಳು. ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂಬುದು ನನ್ನ ಕಳಕಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಉಂಟಾದ ಅಹಿತಕರ ಘಟನೆಗಳ ಬಗ್ಗೆ ಮಕ್ಕಳು ತಲೆಕೆಡಿಸಿಕೊಳ್ಳುವುದು ಬೇಡ. ಭವಿಷ್ಯ ಮುಖ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು. ಪೋಷಕರು ಕೂಡ ನಿರ್ಲಕ್ಷ್ಯ ಮಾಡಬಾರದು. ಎಳೆ ಮನಸ್ಸಿನ ಮಕ್ಕಳ ಮೇಲೆ ಭಾವನೆಗಳನ್ನು ಹೇರುವುದು ಬೇಡ.
ಎಲ್ಲ ಸಮುದಾಯಗಳ ಮಕ್ಕಳು ತಮ್ಮ ಭಾವನೆಗಳನ್ನು ಬದಿಗಿರಿಸಿ ಪರೀಕ್ಷೆ ಬರೆಯಬೇಕು. ಯಾವುದೇ ಕಾರಣಕ್ಕೂ ಪರೀಕ್ಷೆ ತಪ್ಪಿಸುವುದು ಬೇಡ. ಮುಂದಿನ ದಿನಗಳಲ್ಲಿ ಮಕ್ಕಳ ಭಾವನೆಗಳನ್ನು ಗೌರವಿಸಿ ಉಂಟಾಗಿರುವ ತ್ವೇಷಮಯ ವಾತಾವರಣವನ್ನು ತಿಳಿಗೊಳಿಸುವ ಸಂದರ್ಭ ಬಂದೇ ಬರುತ್ತದೆ.
ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ. ʼಬೇಟಿ ಬಚಾವೋ, ಬೇಟಿ ಪಡಾವೋʼ ಕಾರ್ಯಕ್ರಮ ಕೇವಲ ಕಾಗದ ಮೇಲೆ ಅಥವಾ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಹೆಣ್ಣುಮಗುವಿಗೆ ಶಿಕ್ಷಣ ಕೊಡದಿದ್ದರೆ ದೇಶವನ್ನು ಕತ್ತಲೆಗೆ ದೂಡಿದಂತೆ ಎನ್ನುವುದನ್ನು ಯಾರೂ ಮರೆಯಬಾರದು.