ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ : ಹುಬ್ಬಳ್ಳಿ ಘಟನೆಗೆ ಕುಮಾರಸ್ವಾಮಿ ಬೇಸರ

ಬೆಂಗಳೂರು: ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿ. ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಈದ್ಗಾ ಮೈದಾನದ ವಿವಾದಕ್ಕೆ ತೆರೆಬಿದ್ದ ನಂತರ ನೆಮ್ಮದಿಯಾಗಿದ್ದ ಹುಬ್ಬಳ್ಳಿಯ ಶಾಂತ ವಾತಾವರಣ ಕದಡುವ ಷಡ್ಯಂತ್ರವನ್ನು ಯಾರೂ ಸಹಿಸಬಾರದು. ಸಾಮರಸ್ಯ ಮೂಡಿಸಬೇಕಾದ ಜಾಲತಾಣದಲ್ಲಿ ಒಂದು ಧರ್ಮದ ಯುವಕ ಹಂಚಿಕೊಂಡ ಪ್ರಚೋದನಾತ್ಮಕ ಪೋಸ್ಟ್‌ ರಾದ್ಧಾಂತಕ್ಕೆ ಕಾರಣ.

ಕಿಡಿಗೇಡಿ, ತಿಳಿಗೇಡಿ ಯುವಕನ ಕೃತ್ಯದಿಂದ ಉದ್ರಿಕ್ತಗೊಂಡ ಇನ್ನೊಂದು ಸಮುದಾಯದ ಕೆಲವರು ರಾತ್ರಿಯೆಲ್ಲ ಹುಬ್ಬಳ್ಳಿಯಲ್ಲಿ ಬೀಭತ್ಸ ಸೃಷ್ಟಿಸಿ ದ್ವೇಷದ ಬೆಂಕಿಗೆ ಪೆಟ್ರೋಲ್‌ ಸುರಿಯದೇ ಸಹನೆ ಮೆರೆಯಬೇಕಿತ್ತು. ಪೊಲೀಸರ ಮೇಲೆ ದಾಳಿ, ಠಾಣೆ & ಆಸ್ಪತ್ರೆ ಮೇಲೆ ಕಲ್ಲುಗಳನ್ನು ಎಸೆದು ಹಾನಿ ಮಾಡಬಾರದಿತ್ತು.

ಕಿಡಿಗೇಡಿ ಯುವಕನ ಬಂಧನವಾಗಿದೆ. ಕಾನೂನು ಅವನನ್ನು ನೋಡಿಕೊಳ್ಳುತ್ತದೆ. ಇನ್ನೊಂದು ಸಮುದಾಯವು ಕಾನೂನನ್ನು ಕೈಗೆತ್ತಿಕೊಳ್ಳದೆ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಸಹನೆಯಿಂದ ವರ್ತಿಸಬೇಕು. ಕಳೆದ ಕೆಲ ದಿನಗಳಿಂದ ಕರ್ನಾಟಕ ಕೋಮುದಳ್ಳುರಿಯಲ್ಲಿ ಬೇಯುತ್ತಿದೆ, ಎಲ್ಲರಿಗೂ ನೋವಾಗುತ್ತಿದೆ. ಅದು ಮುಂದುವರಿಯುವುದು ಬೇಡ.

ಅನುಭವದಿಂದ ಪಾಠ ಕಲಿಯುತ್ತಿಲ್ಲ ಎನ್ನುವುದಕ್ಕೆ ಹುಬ್ಬಳ್ಳಿ ಘಟನೆ ಒಂದು ನಿದರ್ಶನ. ಹಿಂದೆ ಬೆಂಗಳೂರಿನಲ್ಲಿ ಕಿಡಿಗೇಡಿ ಯುವಕನೊಬ್ಬ ಒಂದು ಧರ್ಮಗುರುವಿನ ಬಗ್ಗೆ ಪ್ರಚೋದನಾತ್ಮಕ ಪೋಸ್ಟ್‌ ಹಾಕಿದ್ದ ಪರಿಣಾಮ, ಶಾಸಕರೊಬ್ಬರ ಮನೆ, ಡಿಜೆ ಹಳ್ಳಿ ಪೊಲೀಸ್‌ ಠಾಣೆಯೇ ಬೆಂಕಿಗೆ ಆಹುತಿಯಾಗಿತ್ತು.

ಹುಬ್ಬಳ್ಳಿ ಇನ್ನೊಂದು ಡಿಜೆ ಹಳ್ಳಿ ಆಗುವುದನ್ನು ಪರಿಣಾಮಕಾರಿಯಾಗಿ ತಡೆದ ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್‌ ಆಯುಕ್ತರು ಹಾಗೂ ಇಡೀ ಪೊಲೀಸ್‌ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ಸಕಾಲಕ್ಕೆ ಅವರು ಎಚ್ಚೆತ್ತ ಪರಿಣಾಮ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಕುಂದಾಪುರದಿಂದ ಹಿಡಿದು ಹುಬ್ಬಳ್ಳಿವರೆಗೆ ನಡೆದ ಎಲ್ಲ ಘಟನೆಗಳನ್ನು ನೋಡಿದರೆ ಎದ್ದು ಕಾಣುವುದು ರಾಜ್ಯ ಸರಕಾರದ ಘೋರ ವೈಫಲ್ಯ. ಬಿಗಿಕ್ರಮ ಕೈಗೊಳ್ಳುವ ಬದಲಿಗೆ ಸರಕಾರ ಬೀಡುಬೀಸಾಗಿ ವರ್ತಿಸಿದ್ದೇ ಇಂಥ ಘಟನೆಗಳಿಗೆ ಕಾರಣ. ಹುಬ್ಬಳ್ಳಿ ಘಟನೆಯನ್ನು ಮುಖ್ಯಮಂತ್ರಿ & ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು.

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಜಾಲತಾಣಗಳ ಮೂಲಕ ಬೆಂಕಿ ಹಾಕಲಾಗುತ್ತಿದೆ. ʼಕೆಲ ಕಿಡಿಗೇಡಿಗಳಿಗೆ ಕಿಚ್ಚೆಂದರೆ ಬಲು ಇಷ್ಟವೆಂಬಂತೆ ಇದೆ.ʼ ʼಅವರಿಗೆ ಸೋಶಿಯಲ್‌ ಮೀಡಿಯಾ ಹಿಂಸೆ ಹರಡುವ ಟೂಲ್‌ʼಕಿಟ್‌ ಆಗಿಬಿಟ್ಟಿದೆ.ʼ ʼಪೊಲೀಸರು, ಮೊದಲು ಅಂಥವರ ಬುಡಕ್ಕೆ ಬೆಂಕಿ ಇಡಬೇಕಿದೆ.ʼ

ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಇಂಥ ಕಿಡಿಗೇಡಿ ಘಟನೆಗಳೆಂದರೆ ಬಲು ಇಷ್ಟ. ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕವನ್ನು ಒಡೆದು ಆಳುವ ಮೂಲಕ ʼಬ್ರಿಟೀಷ್‌ ನೀತಿʼಯನ್ನೇ ಇವು ಅನುಸರಿಸುತ್ತಿವೆ. ಈ ಪಕ್ಷಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ.

ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಿಂದ ಬರ್ಬರವಾದ ಜನರ ಬದುಕಿನ ಬಗ್ಗೆ ʼಸೋಶಿಯಲ್‌ ಮೀಡಿಯಾ ಶೂರರ ಮೌನ ಅಪಾಯಕಾರಿ.ʼ ಅಲ್ಲದೆ; ರಾಷ್ಟ್ರೀಯ ಪಕ್ಷಗಳ ಕಾಣದ ಕೈಚಳಕ, ಮೌನ ಕುಮ್ಮಕ್ಕು ವಿನಾಶಕಾರಿ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!