ಮೈಸೂರು: ಜೆಡಿಎಸ್ ಅನ್ನು ಜಾತಿ ಪಕ್ಷ ಎಂದು ಅಪಪ್ರಚಾರ ಮಾಡುವ ಸಿದ್ದರಾಮಯ್ಯ ಅವರು ಸಿಂಧಗಿಯಲ್ಲಿ ಕೂತು ಜಾತಿಗೊಂದು ಸಮಾವೇಶ ಮಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮೈಸೂರಿನಲ್ಲಿಂದ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆಯ ದಿನ ಸಿದ್ದರಾಮಯ್ಯ ಅವರು ಕುರುಬರಿಗೊಂದು ಪ್ರತ್ಯೇಕ ಸಮಾವೇಶ, ತಳವಾರ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ, ಕೋಳಿ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ ಮಾಡಿದ್ದಾರೆ.
ಇದು ಯಾವ ಸೀಮೆಯ ಜಾತ್ಯಾತೀತತೆ? ಬಾಯಲ್ಲಿ ಮಾತ್ರ ಜಾತ್ಯತೀತ, ಒಳಗೆಲ್ಲ ಬರೀ ಜಾತಿ. ನಮ್ಮ ರಾಜ್ಯದಲ್ಲಿ ಜಾತಿ-ಜಾತಿಗಳ ನಡವೆ ಕಂದಕ ಸೃಷ್ಟಿ ಮಾಡುತ್ತಿರುವುದೇ ಇದೇ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ತಾವು ಗಾಜಿನ ಮನೆಯಲ್ಲಿ ಕೂತು ಇನ್ನೊಬ್ಬರ ಮನೆಯ ಮೇಲೆ ಕಲ್ಲು
ಹೊಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬೇರೆಯವರಿಗೆ ಉಪದೇಶ ಮಾಡುವ ಮುನ್ನ ಅವರು ತಮ್ಮ ನಡವಳಿಕೆಯ ಬಗ್ಗೆ ಜನರಿಗೆ ಸ್ಪಷ್ಟವಾಗಿ ಹೇಳಬೇಕು. ಒಂದು ಕಡೆ ಜಾತಿ ಹೋಗಬೇಕು ಅಂತೀರಿ? ಹಾಗಾದರೆ, ಜಾತಿ ಸಮಾವೇಶಗಳನ್ನು ಯಾಕೆ ಮಾಡುತ್ತೀರಿ? ಚುನಾವಣೆಯಲ್ಲಿ ಮತ ಪಡೆಯುವುದಕ್ಕಷ್ಟೇ ಸಿದ್ದರಾಮಯ್ಯ ಅವರ ಜಾತಿ ರಾಜಕೀಯ ಎಂದು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವ ಕುರಿ ಕಾಯ್ದವರೇ ಎಂದು ಲಘುವಾಗಿ ಮಾತನಾಡಿದ್ದಾರೆ ಸಿದ್ದರಾಮಯ್ಯ. ಇವರೊಬ್ಬರೇನಾ ಕುರಿ ಕಾಯ್ದವರು? ಚಿಕ್ಕ ಮಕ್ಕಳಿದ್ದಾಗ ನಾವು ಕುರಿ ಮಂದೆಯಲ್ಲೇ ಊಟ ಮಾಡಿ ಅಲ್ಲೇ ಮಲಗ್ತಿದ್ದೆವು. ನಾವು ಕೂಡ ಕುರಿ ಸಾಕಿದ್ದೇವೆ, ಈಗಲೂ ಸಾಕುತ್ತಿದ್ದೇವೆ. ಬೇಕಾದರೆ ಬಿಡದಿ ತೋಟಕ್ಕೆ ಬಂದು ನೋಡಲಿ. ಕುರಿ ಸಾಕಣೆ ಮಾಡಿದವರು ಸಿದ್ದರಾಮಯ್ಯ ಒಬ್ಬರೇ ಅಲ್ಲ ಎಂದು ಪ್ರತಿಪಕ್ಷ ನಾಯಕನಿಗೆ ಹೆಚ್ಡಿಕೆ ಟಾಂಗ್ ಕೊಟ್ಟರು.