ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರನ್ನು ನಾಯಿಗಳೆಂದು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೊಲೀಸರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಕಳೆದ ಮೂರು ವರ್ಷದಿಂದ ಅವರದ್ದೇ ಸರ್ಕಾರವಿದೆ ರಾಜ್ಯದಲ್ಲಿ. ಲಂಚದ ಬಗ್ಗೆ ಗೊತ್ತಿದ್ರೆ ಕ್ರಮ ತೆಗೆದುಕೊಳ್ಳಲಿ. ಅವರು ಹುದ್ದೆ ಪಡೆಯಬೇಕಾದ್ರೆ ಅವರು ಲಂಚ ಕೊಟ್ಟಿರ್ತಾರೆ. ಹೀಗಾಗಿ ಅವರು ಕೆಲಸ ಮಾಡುವಾಗ ಲಂಚ ತೆಗೆದುಕೊಳ್ಳುತ್ತಾರೆ.
ಈ ಕೇಸಲ್ಲಿ ತಪ್ಪಿದ್ದವರನ್ನು ಸಸ್ಪೆಂಡ್ ಮಾಡಲಿ. ಅದನ್ನ ಬಿಟ್ಟು ಈ ರೀತಿ ಮಾತಾಡಿದರೆ ಆ ಹುದ್ದೆಗೆ ಸರಿಬರಲ್ಲ. ಪೊಲೀಸರನ್ನ ಸಂಬಳ ತೆಗೆದುಕೊಳ್ತೀರಾ ಅಂತೀರಲ್ಲ. ಹಾಗಾದ್ರೆ ಆ ಸಂಬಳವನ್ನೇನು ನಿಮ್ಮ ಮನೆಯಿಂದ ತಂದುಕೊಡ್ತೀರಾ. ಜನರ ತೆರಿಗೆಯಿಂದ ಕೊಡ್ತಿರುವ ಸಂಬಳವದು. ಪೊಲೀಸರಿಗೆ ಜನರಿಗೆ ರಕ್ಷಣೆ ಕೊಡುವಂತೆ ಹೇಳಬೇಕು. ಅದನ್ನ ಬಿಟ್ಟು ಈ ರೀತಿ ಮಾತಾಡಬಾರದು ಎಂದಿದ್ದಾರೆ.