ಹಾಸನ: ತಪ್ಪು ಮಾಡಿದವರನ್ನು, ಅಪರಾಧಿಗಳನ್ನು ಪೊಲೀಸರು ಜೈಲಿಗೆ ಹಾಕುವುದು ಸಾಮಾನ್ಯ. ಆದರೆ ಇದೀಗ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆದಿದ್ದ ಗಿಡ ತಿಂದಿದ್ದಕ್ಕೆ ಹಸುಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ಪೊಲೀಸ್ ಠಾಣೆ ಆವರಣದಲ್ಲಿ ಬೆಳೆದಿದ್ದ ಗಿಡಗಳನ್ನು ತಿಂದಿದ್ದಕ್ಕೆ ಬೇಲೂರು ಪೊಲೀಸ್ ಠಾಣೆ ಅಧಿಕಾರಿಗಳು ಈ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ. ಹಸುಗಳನ್ನು ವಶಕ್ಕೆ ಕಾಂಪೌಂಡ್ ಒಳಗೆ ಕಟ್ಟಿ ಹಾಕಿದ್ದಾರೆ. ಪಿಐ ಯೋಗೀಶ್ ಆದೇಶದಂತೆ ಈ ರೀತಿ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ.
ವೃದ್ದೆಯಿಬ್ಬರಿಗೆ ಸೇರಿದ ಜರ್ಸಿ ಹಸುಗಳು ಇದಾಗಿದೆ. ಒಂದು ಹಸು ಕಟ್ಟಿದ್ದೀನಿ. ಅದನ್ನು ಮೇಯಿಸುವಾಗ ಅಪ್ಪಿ ತಪ್ಪಿ ಪೊಲೀಸ್ ಠಾಣೆಗೆ ಹೋಗಿದೆ. ಅದನ್ನು ಎಳೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಬಾಯಿಗೆ ಬಂದಂಗೆಲ್ಲಾ ಬೈತಾರೆ. ನಂಗೆ ಹಸುವಿನಿಂದಲೇ ಜೀವನ ನಡೆಯುತ್ತಿರುವುದು. ಹಾಲು ಕರೆದ ದುಡ್ಡನ್ನ ಬಡ್ಡಿಕೊಡ್ತೀರಾ ಅಂತ ಬಾಯಿಗೆ ಬಂದಂಗೆಲ್ಲಾ ಬೈತಾರೆ. ನಂಗೆ ಹಿಂದೆ ಮುಂದೆ ಯಾರು ಇಲ್ಲ. ಗಂಡ ಕೂಡ ಸತ್ತು ಹೋಗಿದ್ದಾನೆ. ಜೀವನ ಹೇಗೆ ಮಾಡುವುದು ಎಂದು ಹಸು ಮಾಲಕಿ ಅಳಲು ತೋಡಿಕೊಂಡಿದ್ದಾರೆ.