ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಪ್ರಜ್ವಲ್ ರೇವಣ್ಣ ಇನ್ನು ವಿದೇಶದಿಂದ ಭಾರತಕ್ಕೆ ಬಂದಿಲ್ಲ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಇದೀಗ ಹಾಸನ ಚಲೋ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಈ ಚಲೋ ನಡೆಯಲಿದೆ. ಮಹಿಳೆಯರ ಘನತೆ ಉಳಿಸಿ ಹಾಸನ ಗೌರವ ಕಾಪಾಡಿ ಎಂಬ ಸ್ಲೋಗನ್ ನೊಂದಿಗೆ ಹಾಸನ ಚಲೋ ನಡೆಸಲಿದ್ದಾರೆ.
ಸಂಘಟನೆಯ ಮುಖಂಡ ಧರ್ಮೇಶ್ ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮೇ 30ಕ್ಕೆ ಬೃಹತ್ ಹೋರಾಟ ನಡೆಯಲಿದೆ. ಇದರಲ್ಲಿ ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ಭಾಗಿಯಾಗಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ವಿಡಿಯೋ ಬಹಿರಂಗ ಮಾಡಿದವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಹೋರಾಟದ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಪ್ರಾಯೋಜಿತ ಹೋರಾಟ ಎಂದು ಹೇಳಿದ್ದಾರೆ. ಈ ಮಾತನ್ನು ಹಿಂತೆಗೆದುಕೊಳ್ಳಬೇಕು. ಇದು ಬೇಜವಾಬ್ದಾರಿಯ ಹೇಳಿಕೆ. ಹಾಗಿದ್ದರೆ ಅವರು ಮಹಿಳೆಯರ ಪರವಾಗಿ ಇಲ್ಲವೇ..? ಇಷ್ಟೊಂದು ದೊಡ್ಡ ಹಗರಣವಾಗಿರುವಾಗ ಅವರ ಈ ಹೇಳಿಕೆಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹೊರ ಬೀಳುತ್ತಿದ್ದಂತೆ ವೋಟ್ ಹಾಕಿ ಎಸ್ಕೇಪ್ ಆದವರು, ಇನ್ನು ಅವರ ಸುಳಿವಿಲ್ಲ. ಫಲಿತಾಂಶ ಬಂದ ಮೇಲೆ ಅವರು ವಾಪಾಸ್ಸಾಗುತ್ತಾರೆಂಬ ಮಾತಿದೆ. ಆದರೆ ಅದಕ್ಕೂ ಮುನ್ನ ಅವರನ್ನು ಬಂಧಿಸಿ, ಕಠಿಣ ಕ್ರಮ ನೀಡಬೇಕೆಂದು ಸಂಘಟನೆಗಳು ಆಗ್ರಹಿಸಿವೆ.