ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರವನ್ನು ಸ್ಥಾಪಿಸಿದೆ. ಆದ್ರೆ ಜೆಡಿಎಸ್ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಅದೆಲ್ಲವೂ ಉಲ್ಟಾ ಆಗಿದೆ. ಅದರಲ್ಲೂ ಜೆಡಿಎಸ್ ನ ಭದ್ರಕೋಟೆಗಳಲ್ಲಿಯೇ ಪಕ್ಷ ಮುಗ್ಗರಿಸಿದೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಮತಗಳನ್ನು ಕಳೆದುಕೊಂಡಿರುವುದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ.
ಸೋಲಿನ ಬಳಿಕ ಪರಾಮರ್ಶೆಯನ್ನೇನೋ ಮಾಡಿಕೊಂಡಿದ್ದಾಗಿದೆ. ಆದ್ರೆ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ನ ಮತ್ತೆ ಮುನ್ನಲೆಗೆ ತರಬೇಕೆಂಬುದು ದಳಪತಿಗಳ ನಿರ್ಧಾರವಾಗಿದೆ. ಹೀಗಾಗಿಯೇ ಒಂದು ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಅದುವೇ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ.
ಸಿ ಎಂ ಇಬ್ರಾಹಿಂ ಅವರನ್ನು ಆ ಸ್ಥಾನದಲ್ಲಿ ಕೂರಿಸುವುದರಿಂದ ಮುಸ್ಲಿಂ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಚಾರ ಇತ್ತು. ಈಗ ಅದು ಫೇಲ್ ಆಗಿರುವ ಕಾರಣ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭವಾನಿ ರೇವಣ್ಣ ಅವರನ್ನು ನೇಮಕ ಮಾಡಲು ಯೋಚನೆ ಮಾಡಲಾಗಿದೆ ಎನ್ನಲಾಗಿದೆ. ಯಾಕಮನದ್ರೆ ಭವಾನಿ ರೇವಣ್ಣ ಅವರಿಗೆ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯವಿದೆ. ಒಗ್ಗೂಡಿಸಿಕೊಂಡು ಹೋಗುವ ಮನೋಬಲವೂ ಇದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಬಾರಿ ಟಿಕೆಟ್ ಗಾಗಿ ಒದ್ದಾಡಿದಾಗಲೂ ಟಿಕೆಟ್ ಸಿಗದೆ ಇದ್ದಾಗ, ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ, ಗೆಲ್ಲುವುದಕ್ಕೆ ನೆರವು ಮಾಡಿಕೊಟ್ಟರು. ಹೀಗಾಗಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗುತ್ತೆ ಎಂಬ ನಂಬಿಕೆಯಿಂದ ಅವರ ಹೆಸರೇ ಮುನ್ನಲೆಯಲ್ಲಿದೆ. ಈಗ ದೇವೇಗೌಡರ ಒಪ್ಪಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.