ಶಿವಮೊಗ್ಗ: 2023ರ ಚುನಾವಣಾ ಕಣ ಸಿದ್ಧವಾಗಿದೆ. ಈ ಬಾರಿ ಚುನಾವಣೆಯ ಬಿಸಿ ಜೋರಾಗಿಯೇ ಸುಡಲಿದೆ. ಯಾಕಂದ್ರೆ ಕುಟುಂಬದಲ್ಲಿ ರಾಜಕೀಯ ಬಿಸಿ ಇದೆ. ಭಿನ್ನಾಭಿಪ್ರಾಯವಿದೆ. ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಭವಾನಿ ರೇವಣ್ಣ ಮತ್ತು ಕುಟುಂಬಸ್ಥರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇನ್ನು ಬಳ್ಳಾರಿಯಲ್ಲಿ ಅಣ್ಣ-ತಮ್ಮಂದಿರ ನಡುವೆಯೇ ನೇರ ಫೈಟ್ ಆರಂಭವಾಗು ಲಕ್ಷಣಗಳಿವೆ. ಇದರ ನಡುವೆ ಈಗ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ನಡುವಿನ ಯುದ್ಧ ಮತ್ತೆ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈ ಬಾರಿ ಮಧು ಬಂಗಾರಪ್ಪ ಅವರನ್ನು ಎರಡನೇ ಬಾರಿಗೆ ಸೋಲಿಸಬೇಕೆಂದು ಕುಮಾರ ಬಂಗಾರಪ್ಪ ಪಣ ತೊಟ್ಟಿದ್ದಾರೆ. ಅದಕ್ಕೆ ಈಗಾಗಲೇ ಸಾಕಷ್ಟು ತಯಾರಿ ಕೂಡ ನಡೆದಿದೆ. ಶಿವಮೊಗ್ಗದ ಅಂಗಳದಲ್ಲಿ ಈಗ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವಿನ ಫೈಟ್ ಜೋರಾಗಿಯೇ ಇರಲಿದೆ.
ಚುನಾವಣಾ ಅಬ್ಬರದ ಪ್ರಚಾರ ಒಂದು ಕಡೆಯಾದರೆ, ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳು ಬೆಳೆಯುತ್ತಿದ್ದಾರೆ. ಭಿನ್ನಾಭಿಪ್ರಾಯ ಶಮನ ಮಾಡಿ, ಪಕ್ಷದಲ್ಲಿ ಇರಿಸಿಕೊಳ್ಳುವುದು ಪಕ್ಷದವರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ. ಅದರ ಜೊತೆಗೆ ಸಂಬಂಧಗಳು ಕೂಡ ಚುನಾವಣೆಯಲ್ಲಿ ಸ್ಪರ್ಧೆಯೊಡ್ಡುತ್ತಿರೋದು ರೋಚಕ ಪಂದ್ಯ ನೋಡಿದಂತ ಅನುಭವವನ್ನೇ ನೀಡುತ್ತಿದೆ.