ನವದೆಹಲಿ : ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಪ್ರತಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ₹300 ಸಬ್ಸಿಡಿ ಹಣವನ್ನು ನೀಡುತ್ತಿದೆ. ಸಿಲಿಂಡರ್ ಬುಕ್ ಮಾಡಿದಾಗ ಪೂರ್ಣ ಮೊತ್ತವನ್ನು ಪಾವತಿಸಬೇಕಾಗಿದ್ದು, ಬಳಿಕ ಸಬ್ಸಿಡಿ ಮೊತ್ತವು ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಆದರೆ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಅಥವಾ ಇತರ ಸಮಸ್ಯೆಯಿಂದ ಹಣ ಖಾತೆಗೆ ಸೇರುವುದು ತಡವಾಗಬಹುದು. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯೋ ಇಲ್ಲವೋ ಎಂಬುದನ್ನು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು.
ಈ-ಕೆವೈಸಿ ಮಾಡಿಸುವುದು ಕಡ್ಡಾಯ
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ಈ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಕೇವಲ ಸಬ್ಸಿಡಿ ಪಡೆಯುವವರು ಮಾತ್ರವಲ್ಲದೆ, ಗೃಹಬಳಕೆಯ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಗ್ಯಾಸ್ ವಿತರಣೆಯಲ್ಲಿ ಅಕ್ರಮ ತಡೆಯಲು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಮತ್ತು ಕಾಳಸಂತೆ ಮಾರಾಟ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಅಂತಹ ಗ್ರಾಹಕರಿಗೆ ಸಬ್ಸಿಡಿ ಹಣ ಬರುವುದು ಸ್ಥಗಿತಗೊಳ್ಳುತ್ತದೆ.
ಆನ್ಲೈನ್ನಲ್ಲಿ ಸಬ್ಸಿಡಿ ಸ್ಟೇಟಸ್ ಚೆಕ್ ಮಾಡುವುದು ಹೀಗೆ
ಕೇಂದ್ರ ಸರ್ಕಾರದ ಅಧಿಕೃತ ಪೋರ್ಟಲ್ mylpg.in ಗೆ ಭೇಟಿ ನೀಡಿ ನಿಮ್ಮ ಎಲ್ಪಿಜಿ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ‘PAHAL’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ 17 ಅಂಕಿಗಳ ಎಲ್ಪಿಜಿ ಐಡಿ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಮಾಡಬೇಕು. ಅಲ್ಲಿ ಸಿಲಿಂಡರ್ ಬುಕಿಂಗ್ ದಿನಾಂಕ, ಸಬ್ಸಿಡಿ ಹಣ ಪಾವತಿಯಾದ ವಿವರ ಹಾಗೂ ಜಮೆಯಾದ ಬ್ಯಾಂಕ್ ಖಾತೆಯ ಮಾಹಿತಿ ಲಭ್ಯವಾಗುತ್ತದೆ. ಇದಲ್ಲದೆ ಬ್ಯಾಂಕ್ ಪಾಸ್ಬುಕ್ ಅಥವಾ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಎಲ್ಪಿಜಿ ಸಬ್ಸಿಡಿ, PAHAL ಅಥವಾ DBT ಹೆಸರಿನಲ್ಲಿ ಹಣ ಜಮೆಯಾಗಿರುವ ವಿವರ ಕಾಣಿಸುತ್ತದೆ.
ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಳ ಮಾರ್ಗಗಳು
ಇನ್ನೂ ಕೆವೈಸಿ ಮಾಡಿಸದ ಗ್ರಾಹಕರು ಸುಲಭವಾಗಿ ಅದನ್ನು ಪೂರ್ಣಗೊಳಿಸಬಹುದು. ಗ್ಯಾಸ್ ಸಂಪರ್ಕ ಪಡೆದಿರುವ ಸ್ಥಳೀಯ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕವೂ ಇದನ್ನು ಮಾಡಿಸಬಹುದು. ಜತೆಗೆ mylpg ವೆಬ್ಸೈಟ್ ಅಥವಾ ಆಯಾ ಗ್ಯಾಸ್ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್ಗಳ ಮೂಲಕವೂ ಆನ್ಲೈನ್ನಲ್ಲಿ ಕೆವೈಸಿ ಪ್ರಕ್ರಿಯೆ ಮುಗಿಸಲು ಅವಕಾಶವಿದೆ. ಒಮ್ಮೆ ಕೆವೈಸಿ ಪ್ರಕ್ರಿಯೆ ಯಶಸ್ವಿಯಾದರೆ ಮುಂದಿನ ಬುಕಿಂಗ್ನಿಂದ ಸಬ್ಸಿಡಿ ಮೊತ್ತ ನೇರವಾಗಿ ಖಾತೆಗೆ ಜಮೆಯಾಗುತ್ತದೆ.












