ಮಂಡ್ಯ: ರಾಜಕಾರಣವೇ ಹಾಗೇ ತಮ್ಮ ನಂತರ ತಮ್ಮ ಮಕ್ಕಳು ಕೂಡ ರಾಜಕಾರಣಕ್ಕೆ ಬರಬೇಕು ಎಂಬುದೇ ಅವರ ಆಸೆಯಾಗಿರುತ್ತೆ. ಹೀಗಾಗಿಯೇ ಎಷ್ಟೋ ರಾಜಕಾರಣಿಗಳು ಮಕ್ಕಳ ರಾಜಕೀಯ ಭವಿಷ್ಯಕ್ಕೋಸ್ಕರ ಕ್ಷೇತ್ರವನ್ನೇ ತ್ಯಾಗ ಮಾಡಿದ ಉದಾಹರಣೆಗಳು ಇದಾವೆ. ತಾವೂ ಚಾಲ್ತಿಯಲ್ಲಿದ್ದಾಗಲೇ ಮಕ್ಕಳ ರಾಜಕೀಯ ಭವಿಷ್ಯವನ್ನು ಭದ್ರಪಡಿಸುವ ಕೆಲಸವೂ ಆಗ್ತಾ ಇರುತ್ತೆ. ಇದೀಗ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೂಡ ಮಗನ ರಾಜಕೀಯ ಭವಿಷ್ಯಕ್ಕೆ ಬುನಾದಿ ಹಾಕ್ತಿದ್ದಾರೆ.
ಇಂದು ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 12 ನಿರ್ದೇಶಕರ ಸ್ಥಾನ ಇದ್ದು, ಅದರಲ್ಲಿ 11 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಆದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಶಾಸಕ ನರೇಂದ್ರ ಸ್ವಾಮಿ, ಸಚಿವ ಚೆಲುವರಾಯಸ್ವಾಮಿ ಅವರಿಗೂ ಅಧ್ಯಕ್ಷ ಸ್ಥಾನ ಪಡೆಯಬೇಕೆಂಬ ಹಠವಿದೆ. ಸ್ಪರ್ಧೆಯಲ್ಲಿಯೂ ಇದ್ದಾರೆ. ಸದ್ಯ ಯಾರೆಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೋ ಅವರೆಲ್ಲರ ಮನವೊಲಿಸಿ, ಮಗನಿಗೆ ಅಧ್ಯಕ್ಷ ಸ್ಥಾನ ಕೊಡಿಸಬೇಕೆಂಬ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
ಮಾಹಿತಿಗಳ ಪ್ರಕಾರ ಸಚಿನ್ ಚೆಲುವರಾಯಸ್ವಾಮಿ ಅವರಿಗೇನೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷಗಿರಿ ಫಿಕ್ಸ್ ಎನ್ನಲಾಗ್ತಾ ಇದೆ. ಸಚಿನ್ ಸಿನಿಮಾ ಕ್ಷೇತ್ರದಲ್ಲಿ ಇದ್ದಂತವರು. ಕಮಲ್ ಶ್ರೀದೇವಿ ಸಿನಿಮಾ ಮೂಲಕ ಹೀರೋ ಆಗಿ ಹೊಸ ಕಮಾಲ್ ಮಾಡಿದ್ದವರು. ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರೆಯುತ್ತಾರಾ ಎಂದುಕೊಂಡಿದ್ದವರಿಗೆ ತಂದೆಯ ಹಾದಿಯಲ್ಲಿಯೇ ನಡೆಯುತ್ತಾರೆ ಎಂಬುದನ್ನ ತೋರಿಸಿದ್ದಾರೆ. ರಾಜಕೀಯಕ್ಕೆ ಮರಳಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿಯೇ ರಾಜಕೀಯ ಕ್ಷೇತ್ರದಲ್ಲಿ ಮುನ್ನುಗ್ಗುತ್ತಾರಾ ಎಂಬುದನ್ನ ನೋಡಬೇಕಿದೆ. ಇಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳು ಇದೆ.






