ಬೆಂಗಳೂರು: ನಿನ್ನೆ ರಾತ್ರಿ ಭಜರಂಗದಳ ಕಾರ್ಯಕರ್ತನ ಕೊಲೆ ನಡೆದಿದ್ದು, ಇಂದು ಅಂತ್ಯ ಸಂಸ್ಕಾರ ಮಾಡಲಾಗಿದೆ. ಈಗಾಗಲೇ ಈ ಪ್ರಕರಣವನ್ನ ಗಂಭೀರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತನಿಖೆಯನ್ನ ಎನ್ಐಎ ಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗ ನಗರದಲ್ಲಿ ಹರ್ಷ ಎಂಬ ಯುವಕನ ಕೊಲೆಯಾಗಿದೆ. ಕರ್ನಾಟಕದಲ್ಲಿ ಇದು ಮೊದಲ ಬಾರಿಗೆಯಾದ ಪ್ರಕರಣವಲ್ಲ. ಹರ್ಷ ಅವರ ಕೊಲೆ ಹಿಂದೆ ಭಾರೀ ಷಡ್ಯಂತ್ರಗಳಿರುವುದು ಕಂಡು ಬರುತ್ತಿದೆ.

ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವವರನ್ನ ಗುರಿಯಾಗಿಸಿಕೊಂಡು ಹತ್ಯೆ ಮಾಡುವುದು ಈ ಹಿಂದೆಯೂ ರಾಜ್ಯದಲ್ಲಿ ನಡೆದಿದೆ. ಹಾಗೂ ಬೆಂಗಳೂರಿನ ರುದ್ರೇಶ್ ಅವರ ಕೊಲೆಯನ್ನು PFI ನಡೆಸಿರುವುದು ಸಾಬೀತಾಗಿದೆ. ಹರ್ಷ ಅವರ ಕೊಲೆಯ ಹಿಂದಿರುವ ಪಿತೂರಿಯನ್ನ ಬೇಧಿಸಲು ಈ ಹತ್ಯೆಯ ಕೇಸನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಪತ್ರದ ಮೂಲಕ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

