ಹರ್ಷ ಕೊಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ; ಎಸ್‍ಯುಸಿಐ ಆಗ್ರಹ

1 Min Read

ಚಿತ್ರದುರ್ಗ, (ಫೆ.23) :  ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಸಂಘ ಪರಿವಾರದ ಕಾರ್ಯಕರ್ತನ ಭೀಕರ ಕೊಲೆಯ ಬಗ್ಗೆ ಎಸ್‍ಯುಸಿಐ ಸಿ ಪಕ್ಷದ ಕರ್ನಾಟಕ ರಾಜ್ಯ ಸಮಿತಿಯು ತೀವ್ರ ಆಘಾತ ವ್ಯಕ್ತಪಡಿಸುತ್ತಾ ಅದನ್ನು ಉಗ್ರವಾಗಿ ಖಂಡಿಸುತ್ತದೆ.

ಅದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದೂ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಆಗ್ರಹಪಡಿಸುತ್ತದೆ. ಅಲ್ಲದೆ ನಂತರದ ನಡೆದ ಹಿಂಸೆ, ಗಲಭೆಗಳ ಕುರಿತೂ ಸಹ ಎಸ್‍ಯುಸಿಐ(ಸಿ) ತೀವ್ರ ಆತಂಕ ವ್ಯಕ್ತಪಡಿಸುತ್ತದೆ. ಇಂತಹ ಕೋಮು ಸೂಕ್ಷ್ಮ ಸಂದರ್ಭದಲ್ಲಿ ಮೃತ ಶರೀರರದ ಮೆರವಣಿಗೆಗೆ ಅವಕಾಶ ನೀಡಿದ್ದು ಪೊಲೀಸರ ಬೇಜವಾಬ್ದಾರಿತನದ ಪರಾಕಾಷ್ಠೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು, ಸಂಸದರು ಇಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಗಲಭೆಯ ಅಮಾಯಕ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕೂಡ ನಾವು ಒತ್ತಾಯಿಸುತ್ತೇವೆ. ಕೊಲೆಗಡುಕರು ಯಾವ ಕೋಮಿಗೆ ಸೇರಿದ್ದರೂ ಅವರು ಅಪರಾಧಿಗಳೆ. ಈ ವಿದ್ಯಮಾನವನ್ನು ಬಳಸಿ ಕೋಮು ವಿದ್ವೇಷ ಹರಡುವುದೂ ಅಪರಾಧವೇ.

ರಾಜ್ಯದ ದುಡಿಯುವ ವರ್ಗ, ರೈತರು ಮತ್ತು ಮಧ್ಯಮ ವರ್ಗದ ಜನತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಗಳಿಗೆಯಲ್ಲಿ ಅವುಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಬದಲು ಕೋಮುದ್ವೇಷದ ವಾತಾವರಣ ಸ್ವಯಂ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಲಾಗದು. ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಎಸ್‍ಯುಸಿಐ-ಕಮ್ಯುನಿಸ್ಟ್ ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *