ಧಾರವಾಡ: ಶಾಲಾ-ಕಾಲೇಜಿನಲ್ಲಿ ಮಕ್ಕಳು ಏನು ಕಲಿಯುತ್ತಾರೋ ಅದು ಅವರ ಮುಂದಿನ ಭವಿಷ್ಯಕ್ಕೆ ನಾಂದಿ ಆಗುತ್ತದೆ. ಅಲ್ಲಿನ ಸೌಲಭ್ಯ, ಶಿಕ್ಷಣ ಚೆನ್ನಾಗಿದ್ದರೆ ಆ ಭವಿಷ್ಯ ಉಜ್ವಲವಾಗುತ್ತದೆ. ಆದರೆ ಸರ್ಕಾರಿ ಶಾಲೆಗಳು ಈಗ ಯಾವ ಸ್ಥಿತಿಯಲ್ಲಿದ್ದಾವೆ ಎಂಬುದನ್ನು ಬಿಡಿಸಿ ಹೇಳುವ ಹಾಗಿಲ್ಲ. ಆದರೆ ಧಾರವಾಡ ಜಿಲ್ಲೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪೆಷಲ್ ಗಿಫ್ಟ್ ನೀಡುತ್ತಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ ಅವರು, ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಹೊಸ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಸಿ ಎಸ್ ಆರ್ ಫಂಡ್ ಮುಖೇನ ತಮ್ಮ ಕ್ಷಮತಾ ಸೇವಾ ಸಂಸ್ಥೆ ಜೊತೆಗೂಡಿ ಈ ಕಾರ್ಯವನ್ನು ಮುಂದಿನ ಎರಡು ವರ್ಷಗಳಲ್ಲಿ ಜಾರಿ ಪೂರ್ಣಗೊಳಿಸುವಂತೆ ಭರವಸೆ ನೀಡಿದ್ದಾರೆ.
ಇನ್ನು ಬಣ್ಣ ದರ್ಪಣ ಕಾರ್ಯಕ್ರಮದಡಿ, ಪ್ರತಿ ತಿಂಗಳು 100 ಶಾಲೆಗಳಿಗೆ ನಾಳೆಯಿಂದ ಬಣ್ಣ ಬಳಿಯುವ ಕಾರ್ಯ ಆರಂಭವಾಗಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಶಾಲೆಗಳಿಗೆ ಹೊಸ ಬಣ್ಣ ಬಳಿಯುವ ಗುರಿಯನ್ನು ಹೊಂದಿದ್ದು, ಈ ಕಾರ್ಯ ನಾಳೆಯಿಂದ ಆರಂಭವಾಗಲಿದ್ದು, ಮುಂದಿನ ವರ್ಷ ದೀಪಾವಳಿಗೆ ಮುಕ್ತಾಯವಾಗಲಿದೆ.