ಉದ್ಯಮಿಯೊಬ್ಬರಿಗೆ 7 ಕೋಟಿ ಮೋಸ ಮಾಡಿದ ಆರೋಪದ ಮೇಲೆ ಹಿಂದೂ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪರಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ ಈ ಮಧ್ಯೆ ಒಂದೊಂದೆ ಹೊಸ ವಿಚಾರಗಳು ತೆರೆದುಕೊಳ್ಳುತ್ತಿವೆ. ಅದರಲ್ಲಿ ಈಗ ಹಾಲಶ್ರೀ ಸ್ವಾಮೀಜಿಯ ವಿಚಾರವೂ ಒಂದು. ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಯ ಕೈವಾಡವಿದೆ ಎನ್ನಲಾಗಿದೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿಕೆ ಆಧಾರದ ಮೇಲೆ ಚೈತ್ರಾ ಕುಂದಾಪುರ ಅಂಡ್ ಟೀಂ ಅನ್ನು ಬಂಧಿಸಲಾಗಿದೆ. ತನಿಖೆ ನಡೆದ ಮೇಲೆ ಎಲ್ಲಾ ಸತ್ಯ ಗೊತ್ತಾಗಲಿದೆ. ಇನ್ನು ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಯ ಕೈವಾಡವಿದೆ ಎಂದಾದರೆ ಅದರ ಬಗ್ಗೆಯೂ ತನಿಖೆಯಾಗುತ್ತೆ. ಸ್ವಾಮೀಜಿಯದ್ದು ತಪ್ಪು ಇದ್ದರೆ, ಸಾಬೀತಾದರೆ ಅವರ ಬಂಧನವೂ ಆಗುತ್ತೆ. ಪೊಲೀಸರು ಸುಮೋಟೋ ಹಾಕಿಕೊಂಡಿಲ್ಲ, ದೂರು ಬಂದಿದೆ. ಅದರ ಆಧಾರದ ಮೇಲೆ ಬಂಧನವಾಗಿದೆ.
ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನ ಇದಕ್ಕೆ ಮಿಕ್ಸ್ ಮಾಡುವುದು ಬೇಡ. ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿಯಲ್ಲಿಯೇ ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. 3.5 ಕೋಟಿ ಹಣ ಪಡೆದ ದೂರು ನೀಡಿದ್ದಾರೆ. ಈಗ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಉಳಿದ ವಿಚಾರ ತನಿಖೆಯ ನಂತರ ತಿಳಿಯಲಿದೆ. ತಪ್ಪು ಯಾರದ್ದೇ ಆಗಿರಲಿ, ಕಾನೂನು ಪ್ರಕಾರ ಕ್ರಮ ಜರುಗಲಿದೆ ಎಂದಿದ್ದಾರೆ.