2019ರ ಚುನಾವಣೆಯಲ್ಲಿ ಇದ್ದ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಹೆಚ್. ವಿಶ್ವನಾಥ್ ಸೇರಿದಂತೆ ಹಲವರ ಪಾತ್ರ ಮಹತ್ವದ್ದಾಗಿತ್ತು. ಆಕಾಂಕ್ಷೆಗಳನ್ನು ದೊಡ್ಡ ಮಟ್ಟದಲ್ಲಿ ಇಟ್ಟುಕೊಂಡು ಬಿಜೆಪಿ ಸೇರಿದ್ದ ವಿಶ್ವನಾಥ್ ಅವರಿಗೆ ಅದೇಕೋ ಅಂದುಕೊಂಡಂತೆ ಸ್ಥಾನಮಾನ ಸಿಗಲೇ ಇಲ್ಲ. ಆಗಾಗ ಸ್ವಪಕ್ಷದ ಮೇಲೆ ಮುನಿಸನ್ನು ಹೊರ ಹಾಕುತ್ತಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಗೆ ಬರುತ್ತಾರ ಎಂಬ ಅನುಮಾನ ಹುಟ್ಟು ಹಾಕಿದೆ ಅವರ ನಡೆ.
ನಿನ್ನೆಯಷ್ಟೇ ದೆಹಲಿಗೆ ಹೋಗಿದ್ದ ಹೆಚ್. ವಿಶ್ವನಾಥ್, ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದರು. ಆಗಲೇ ಹಲವು ವಿಚಾರಗಳು ಚರ್ಚೆಗೆ ಬಂದಿದ್ದವು. ಇಂದು ಆರೋಗ್ಯ ವಿಚಾರಣೆಯ ನೆಪದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಹಳ್ಳಿ ಹಕ್ಕಿ ಮರಳಿ ಗೂಡಿಗೆ ಹಾರುತ್ತಿರುವ ಸೂಕ್ಷ್ಮತೆ ಸಿಗುತ್ತಿದೆ ಎನ್ನಲಾಗುತ್ತಿದೆ.
ಮೊದಲಿಗೆ ಕಾಂಗ್ರೆಸ್ ನಲ್ಲಿ ವಿಶ್ವನಾಥ್, ಸಿದ್ದರಾಮಯ್ಯ ಅವರ ನಡೆಗೆ ಬೇಸತ್ತು ಜೆಡಿಎಸ್ ಸೇರಿದ್ದರು. ಕಳೆದ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿದ್ದರು. ಆದ್ರೆ ಈ ಸಮ್ಮಿಶ್ರ ಸರ್ಕಾರ ಐದು ತಿಂಗಳು ಸರಿಯಾಗಿ ಅಧಿಕಾರ ನಡೆಸುವುದಕ್ಕೆ ಬಿಡದೆ ಹದಿನೇಳು ಜನ ಬಿಜೆಪಿ ಸೇರಿದ್ದರು. ಬಹುಮತ ಸಾಬೀತು ಪಡಿಸಲಾಗದೆ ಸಮ್ಮಿಶ್ರ ಸರ್ಕಾರ ಕೆಳಗೆ ಬಿತ್ತು. ಈಗ ಮತ್ತೆ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸುತ್ತಿರಬಹುದು ಎಂಬ ಚರ್ಚೆಗಳು ಶುರುವಾಗಿದೆ.