ಬೆಂಗಳೂರು: ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಈಗೇನೋ ಮಾಡ್ತಿದ್ದಾರೆ ಕಾಂಗ್ರೆಸ್ ನವರು.ಬಳ್ಳಾರಿಯಿಂದ ಬಂದ್ರಲ್ಲಪ್ಪ ಸಿದ್ದರಾಮಯ್ಯನವರೇ, ಐದು ವರ್ಷ ನೀವೇ ಇದ್ರಲ್ಲ… ಅಷ್ಟೂ ವರ್ಷದಲ್ಲಿ ಏನು ಕೊಟ್ಟಿರಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 18 ಸಾವಿರ ಕೋಟಿ ಎಸ್ಟಿಮೇಟ್ ಮಾಡಿ ಈಗ ಎಷ್ಟಾಗಿದೆ? ಕಾಂಗ್ರೆಸ್ ನವರ ಡಬಲ್ ಸ್ಟ್ಯಾಂಡರ್ಡ್ ಇದು ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ತೆಗೆದುಕೊಂಡಿಲ್ಲ, ಅವರ ಜೇಬು ತುಂಬಿಸಿಕೊಳ್ಳೋ ಗುತ್ತಿಗೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡೋದು ನಿಲ್ಲಿಸಿ ಮೊದಲು. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸೀಟುಗೆದ್ದಿದ್ದೇವೆ ಎಂದು ತಿರುಗೇಟು ನೀಡಿದರು.
ನನ್ನ ತಲೆಯಲ್ಲಿ ಇನ್ನೂ ಒಂದೆರಡು ಕೂದಲು ಉಳಿಸ್ಕೊಂಡಿದ್ದೀನಿ. ದಿನಕ್ಕೆ ಒಬ್ಬರು ನಮ್ಮ ಮನೆಗೆ ಬರ್ತೀರಾ.. ಬಿಜೆಪಿ-ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ನಾನು ಕ್ಯಾಂಡಿಡೇಟ್ ಹಾಕಬೇಕಾ? ಮುಸ್ಲಿಂ ಕ್ಯಾಂಡಿಡೇಟ್ ಹಾಕಿದ್ರೆ ಬಿಜೆಪಿಗೆ ಅನುಕೂಲ ಆಗಲಿ ಅಂತ ಹಾಕಿದ್ದೇನೆ ಅನ್ನೋದು, ಓಬಿಸಿ ಹಾಕಿದ್ರೆ ಕಾಂಗ್ರೆಸ್ ಮುಗಿಸೋಕೆ ಹಾಕಿದ್ದೇನೆ ಅನ್ನೋದು, ಲಿಂಗಾಯತ ಕ್ಯಾಂಡಿಡೇಟ್ ಹಾಕಿದ್ರೆ ಬಿಜೆಪಿ ಮುಗಿಸೋಕೆ ಹಾಕಿದಿನಿ ಅನ್ನೋದು. ನನ್ನ ಪಕ್ಷದಲ್ಲಿ ನಾನು ಯಾರು ಬೇಕನ್ನಾದ್ರೂ ಕ್ಯಾಂಡಿಡೇಟ್ ಹಾಕ್ತೀನಿ ಎಂದು ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಬಿ ಟೀಂ ಅಂತ ಬೊಗಳಿದವರು ನಮ್ಮ ಮನೆಗೆ ಸರ್ಕಾರ ನಡೆಸೋಣ ಅಂತ ನೀವೇ ಬಂದ್ರಲ್ಲ.. ಅಧಿಕಾರ ಕೊಟ್ಟ ಮೇಲೆ ನೆಟ್ಟಗೆ ನಡೆಸೋಕಾದ್ರೂ ಬಿಟ್ಟರಾ? ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕೂತ್ಕೊಂಡು ಕುಮಾರಸ್ವಾಮಿ ಸಿಎಂ ಆದ್ರೆ ನಮಗೇನು ಲಾಭ ಅಂದ್ರು. ಈಗ ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಅಂತಾರೆ ಎಂದು ಲೇವಡಿ ಮಾಡಿದರು.